

ಅರಕೇರಾ: ಮಕ್ಕಳು ಶೈಕ್ಷಣಿಕ ಸಾಧನೆಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಸಾಧನೆ ಮಾಡುವಂತೆ ಪ್ರೇರೇಪಿಸಬೇಕು ಎಂದು ಡಿಡಿಪಿಐ ಕೆ.ಡಿ ಬಡಿಗೇರ್ ಹೇಳಿದರು.
ಇದನ್ನೂ ಓದಿ: ಸರ್ವರಿಗೂ ಉನ್ನತ ಶಿಕ್ಷಣದ ಸಂಕಲ್ಪ
ತಾಲೂಕಿನ ಗೆಜ್ಜೆಭಾವಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಅಜೀಂ ಪ್ರೇಮ್‌ಜೀ ಫೌಂಡೇಷನ್ ಹಮ್ಮಿಕೊಂಡಿದ್ದ ಮಕ್ಕಳ ಕಲಿಕಾ ಮೇಳ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಶಾಲೆಗಳಲ್ಲಿ ಶಿಕ್ಷಕರ ಕೊರತೆ ನಡುವೆ ಮಕ್ಕಳು ಉತ್ತಮ ಸಾಧನೆ ಮಾಡುತ್ತಿದ್ದಾರೆ.
ಕಾಯಂ ಶಿಕ್ಷಕರು ಇಲ್ಲದಿರುವ ಕೊರಗನ್ನು ಅತಿಥಿ ಶಿಕ್ಷಕರು ನೀಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಮಕ್ಕಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದ್ದಾರೆ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಶಿಕ್ಷಕರು ಪ್ರೋತ್ಸಾಹಿಸಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಲು ಸಹಕಾರ ನೀಡಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದರು.
ಬಿಇಒ ಮಲ್ಲಿಕಾರ್ಜುನ ಮಾತನಾಡಿ, ಸಾಧನೆ ಯಾರ ಸ್ವತ್ತಲ್ಲ. ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಬೇಕು. ಮೌಲ್ಯಯುತ ಶಿಕ್ಷಣ ಪಡೆದು ಜೀವನದಲ್ಲಿ ಉತ್ತಮ ಸಾಧನೆ ಮಾಡಿದಾಗ ಶ್ರೇಯಸ್ಸು ದೊರೆಯುತ್ತದೆ ಎಂದರು. ಅಜೀಂ ಪ್ರೇಮ್‌ಜೀ ಫೌಂಡೇಷನ್ ಸಂಯೋಜಕಿ ನಳಿನಿ ಮಾತನಾಡಿದರು. ವಿದ್ಯಾರ್ಥಿಗಳು ತಯಾರಿಸಿದ ವಿಷಯವಾರು ವಿವಿಧ ಚಟುವಟಿಕೆಗಳನ್ನು ಸ್ಟಾಲ್‌ಗಳಲ್ಲಿ ಪ್ರದರ್ಶಿಸಲಾಯಿತು. ಅತ್ಯುತ್ತಮ ಚಟುವಟಿಕೆಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು.
ಗ್ರಾಪಂ ಅಧ್ಯಕ್ಷ ಧನಂಜಯ, ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ, ಬಿಆರ್‌ಪಿ ಶಿವಕುಮಾರ ನಾಡಗೌಡ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹನುಮಂತ್ರಾಯ ಶಾಖೆ, ಕ್ರೈ ಸಂಸ್ಥೆ ಸಂಚಾಲಕ ರಾಮಣ್ಣ ಎನ್ ಗಣೇಕಲ್ ಪ್ರಮುಖರಾದ ರೆಡ್ಡೆಪ್ಪ ಭೋವಿ, ರಾಜುಗೌಡ, ಚನ್ನಪ್ಪ, ಗಂಗಾಧರ ಇತರರಿದ್ದರು.