

ಮುಂಡರಗಿ: ಜೀವನದಲ್ಲಿ ಸೋಲುಗಳಿಗೆ ಎದೆಗುಂದದೆ ಗೆಲುವಿಗಾಗಿ ನಿರಂತರ ಪ್ರಯತ್ನ ಮಾಡಬೇಕು. ಸತತ ಪ್ರಯತ್ನ ಮತ್ತು ಸಹನೆ ನಮಗೆ ಗೆಲುವು ತಂದುಕೊಡುತ್ತದೆ ಎಂದು ಶಿಕ್ಷಕಿ ನಿರ್ಮಲಾ ಪಾಟೀಲ ಹೇಳಿದರು.
ಪಟ್ಟಣದ ಅನ್ಮೋಲ್ ಯೋಗ ತರಬೇತಿ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ನಿಂಗು ಸೊಲಗಿ ಮಾತನಾಡಿ, ಸಾಧನೆ ಸುಲಭವಾಗಿ ದೊರೆಯುವುದಿಲ್ಲ. ಸಾಧನೆಯ ಹಾದಿಯಲ್ಲಿ ಹಲವು ಅಡೆತಡೆಗಳ ನಡುವೆ ವಿಶೇಷ ಸಾಧನೆ ಮಾಡಿರುವವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಈ ಮೂಲಕ ಇತರರು ಸಾಧನೆ ಮಾಡಲು ಪ್ರೋತ್ಸಾಹಿಸಬೇಕು ಎಂದರು.
ಕುಟುಂಬದ ಬಡತವನ್ನು ಮೆಟ್ಟಿನಿಂತು ಎಂಬಿಬಿಎಸ್ ಶಿಕ್ಷಣ ಪೂರೈಸಿದ ಸಂಗೀತಾ ಸಜ್ಜನರ, ಯೋಗ ಸಾಧನೆಯೊಂದಿಗೆ ಪಿಯುಸಿ ವಿಜ್ಞಾನ ವಿಷಯದಲ್ಲಿ ಶೇ.95ಅಂಕ ಪಡೆದ ಸೋನಿಯಾ ಶೇಟ್, ಪಿಯು ವಾಣಿಜ್ಯ ವಿಷಯದಲ್ಲಿ ಶೇ.94 ಅಂಕ ಪಡೆದ ಕಮಲಾಕ್ಷಿ ಮಾಳೆಕೊಪ್ಪ ಹಾಗೂ ಕೌಜಗೇರಿಯ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ಬಸವರಾಜ ಸಜ್ಜನ ಅವರನ್ನು ಸನ್ಮಾನಿಸಲಾಯಿತು.
ಅನ್ಮೋಲ್ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಕಾಂತ ಇಟಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೋಗ ಕೇಂದ್ರದ ನಿರ್ದೇಶಕಿ ಮಂಗಳಾ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಅಳವಂಡಿ, ಲತಾ ಶೇಟ್ ಸುಷ್ಮಾ ಸಜ್ಜನರ, ನಾಗಪ್ಪ ಇಟಗಿ, ಸಹನಾ ಶಿದ್ಲಿಂಗ, ಅನ್ನಪೂರ್ಣ ಸಜ್ಜನರ ಇದ್ದರು.