ಸಾಧನೆಗೆ ಬೇಕು ಛಲದ ಗುಣ

SIRIGERE PRATHIBA 11
Published on

ಸಿರಿಗೆರೆ: ಕಠಿಣ ಶ್ರಮ, ಛಲದ ಗುಣ ಸಾಧನೆ ಹಾದಿಯ ಹೆದ್ದಾರಿ ಆಗಿದ್ದು, ಮಕ್ಕಳಲ್ಲಿ ಬೆಳೆಸುವ ಹೊಣೆಗಾರಿಕೆ ಪಾಲಕರು-ಶಿಕ್ಷಕರದ್ದಾಗಿದೆ ಎಂದು ಕರ್ನಾಟಕ ಮಕ್ಕಳ ವೇದಿಕೆ ಜಿಲ್ಲಾಧ್ಯಕ್ಷೆ ರೂಪಾ ಜನಾರ್ಧನ್ ಅಭಿಪ್ರಾಯಪಟ್ಟರು.

ಸಿರಿಗೆರೆ ಸಮೀಪದ ಕಡ್ಲೆಗುದ್ದು ಗ್ರಾಮದ ಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ಕರ್ನಾಟಕ ಮಕ್ಕಳ ವೇದಿಕೆ ಗುರುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಧನೆಯ ಹಾದಿ ಸುಗಮವಲ್ಲ. ಛಲವಿದ್ದವರು ಮಾತ್ರ ಆ ದಾರಿಯಲ್ಲಿ ಸಾಗಿ ಯಶಸ್ಸು ಸಾಧಿಸಲು ಸಾಧ್ಯ. ನಮ್ಮ ಕ್ರಿಯೆಗಳಿಗೆ ಪೂರಕವಾಗಿ ಪ್ರತಿಕ್ರಿಯೆ ಇರುತ್ತದೆ. ಅದೇ ರೀತಿ ನಾವು ಅಪೇಕ್ಷೆ ಪಟ್ಟಂತ ಫಲಿತಾಂಶವನ್ನು ಪಡೆಯಲು ಅತೀ ವೇಗವಾಗಿ ಸಾಧನೆಯತ್ತ ಸಾಗಬೇಕಾಗಿದೆ ಎಂದರು.

ಪ್ರತಿಭೆ ಎಲ್ಲರಲ್ಲೂ ಇದೆ. ಅದನ್ನು ಗುರುತಿಸುವ ಮನಸ್ಸುಗಳು ಮುಖ್ಯ. ಜತೆಗೆ ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್ಯ. ಇವೆರಡರ ನಡುವೆ ಸಾಮಾಜಿಕ ಜವಾಬ್ದಾರಿಯ ಜತೆಗೆ ಹೊಂದಾಣಿಕೆ ಮಾಡಿಕೊಂಡು ಹೆಜ್ಜೆ ಹಾಕಿದರೆ ಯಶಸ್ಸು ನಿಶ್ಚಿತ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜಯದೇವಮೂರ್ತಿ ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ಮತ್ತು ನೈತಿಕ ಮೌಲ್ಯ ಇರಬೇಕು. ಮರಳಿ ಯತ್ನವ ಮಾಡು ಎಂಬ ಮಾತಿನಂತೆ ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಲ್ಲದು. ಅದರ ಜತೆಗೆ ಜೀವನದ ಸವಾಲನ್ನು ಎದುರಿಸುವ ಶಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.

ಶಿಕ್ಷಕ ಡಾ.ಮಹೇಶ್ ಮಾತನಾಡಿ, ಸಾಧನೆಯ ಮೆಟ್ಟಿಲನ್ನು ಏರುವ ತುಡಿತ ನಮ್ಮಲ್ಲಿರಬೇಕು. ನಮ್ಮ ಸಾಧನೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು. ಮಕ್ಕಳ ವೇದಿಕೆ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶಭಕ್ತಿ, ಜಾನಪದ ಗೀತೆ, ಸ್ವಾತಂತ್ರ್ಯ ಹೋರಾಟಗಾರರ ವೇಷ-ಭೂಷಣ, ಚಿತ್ರಕಲೆ ಸ್ಪರ್ಧೆಗಳನ್ನು ಕರ್ನಾಟಕ ಮಕ್ಕಳ ವೇದಿಕೆ ವತಿಯಿಂದ ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ದೇಶಭಕ್ತಿ ಗೀತೆ-ಮಾನಸಾ, ತನುಪ್ರಿಯಾ, ಸ್ನೇಹಾ. ಜಾನಪದ ಗೀತೆ-ನಾಗವೇಣಿ, ಮನು, ಶಿವಕುಮಾರ್. ಕವನ ವಾಚನ-ತೇಜಸ್ವಿನಿ ಅಮೂಲ್ಯಾ, ಯೋಗೇಶ್ವರಿ. ಚಿತ್ರಕಲೆ-ಪ್ರದೀಪ್, ದಿವ್ಯಾ, ಅಜಯ್, ವೇಷ ಭೂಷಣ ಸ್ಪರ್ಧೆಯಲ್ಲಿ ಸಿಂಧು, ಅನು, ಯಶಶ್ವಿನಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net