

ಶಿರಹಟ್ಟಿ: ಸತತ ಅಧ್ಯಯನದ ಜತೆಗೆ ಛಲ ಮತ್ತು ಕಠಿಣ ಪರಿಶ್ರಮ ಮೈಗೂಡಿಸಿಕೊಂಡಾಗ ಮಾತ್ರ ಯಾವುದೇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಹೇಳಿದರು.
ಪಟ್ಟಣದ ಸಿ.ಸಿ.ಎನ್. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಿ ಅವರು ಮಾತನಾಡಿದರು. ಉನ್ನತ ವ್ಯಾಸಂಗದಲ್ಲೂ ಇದೇ ಪರಂಪರೆ ಕಾಯ್ದುಕೊಂಡು ಉತ್ತಮ ಅಂಕ ಗಳಿಸುವ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಯಶಸ್ಸು ಗಳಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ವತಿಯಿಂದ ಲ್ಯಾಪ್ಟಾಪ್ ನೀಡಲಾಗುತ್ತಿದ್ದು ಈ ವರ್ಷ ಬೆಳ್ಳಟ್ಟಿ ಶಾಲೆಯ ಗೀತಾ ಕಾಶಣ್ಣವರ, ಲಕ್ಷ್ಮೇಶ್ವರದ ಗುಲ್ನಾಜಬಾನು ಹುಲಗೇರಿ, ರಾಮಗಿರಿಯ ಕಾವ್ಯಾ ಪಾಟೀಲ, ಮಾಡಳ್ಳಿ ಶಾಲೆಯ ಶ್ವೇತಾ ತಳಗೇರಿ ಭಾಜನರಾಗಿದ್ದಾರೆ ಎಂದರು.
ತಾಪಂ.ಅಧ್ಯಕ್ಷ ಈಶಪ್ಪ ಲಮಾಣಿ,ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಚಂದ್ರಕಾಂತ ನೂರಶೆಟ್ಟರ, ಪಪಂ. ಉಪಾಧ್ಯಕ್ಷ ಇಸಾಕ್ ಆದ್ರಳ್ಳಿ, ಸದಸ್ಯ ಪಕ್ಕೀರೇಶ ರಟ್ಟಿಹಳ್ಳಿ, ತಾಪಂ.ಇಒ. ಡಾ.ಎನ್.ಎಚ್. ಓಲೇಕಾರ, ಬಿಆರ್ಸಿ ಅಧಿಕಾರಿ ವೈ.ಎಚ್. ನದಾಫ, ಎಂ.ಕೆ. ಲಮಾಣಿ, ಎಂ.ಬಿ, ಹೊಸಮನಿ, ರವಿ ಬೆಂಚಳ್ಳಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.