

ಮಹಾನ್ ನಾಯಕರನ್ನು ಹುಟ್ಟು ಹಾಕಿದ ಕ್ಷೇತ್ರ 2002ರಲ್ಲಿ ಸಂಸತ್ ಪ್ರವೇಶಿಸಿದ ದೇವೇಗೌಡ
ಗಂಗಾಧರ್ ಬೈರಾಪಟ್ಟಣ ರಾಮನಗರ
ಈಗಿನ ಗ್ರಾಮಾಂತರ ಮತ್ತು ಹಿಂದಿನ ಕನಕಪುರ ಲೋಕಸಭೆ ಕ್ಷೇತ್ರ ಹಲವು ದಾಖಲೆಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಹಲವಾರು ಮಹಾನ್ ನಾಯಕರನ್ನು ಹುಟ್ಟು ಹಾಕಿದ ಈ ಕ್ಷೇತ್ರದಲ್ಲಿ, ಸೋಲಿನ ರುಚಿಯನ್ನೂ ತೋರಿಸಿದೆ.
ಕೆಲವು ನಾಯಕರು ಮಾಡಿರುವ ದಾಖಲೆಗಳು ಇನ್ನೂ ಉಳಿದುಕೊಂಡಿದ್ದು, ಇದನ್ನು ಮುರಿಯುವ ಪ್ರಯತ್ನ ಸದ್ಯಕ್ಕೆ ಯಾರಿಂದಲೂ ಸಾಧ್ಯವಾಗಿಲ್ಲ. ಇಂತಹ ದಾಖಲೆಗಳನ್ನು ಮಾಡಿದವರಲ್ಲಿ ಸಿ.ಕೆ.ಜಾಫರ್ ಷರೀಫ್, ಎಂ.ವಿ ಚಂದ್ರಶೇಖರ ಮೂರ್ತಿ, ಎಂ.ವಿ ರಾಜಶೇಖರನ್ ಪ್ರಮುಖರು.
ಭಾರೀ ಅಂತರದ ಗೆಲುವು
1971ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದ ಸಿ.ಕೆ.ಜಾಫರ್ ಷರೀಫ್ ಅವರು ಅಂದು ಮಾಡಿದ ಸಾಧನೆಯನ್ನು ಇನ್ನೂ ಸರಿಗಟ್ಟುವ ಇಲ್ಲವೇ ಮುರಿಯುವ ಕೆಲಸ ಯಾರಿಂದಲೂ ಆಗಲೇ ಇಲ್ಲ. ಅಂದು ತಮ್ಮ ಎದುರಾಳಿಯಾಗಿದ್ದ ಸಂಸ್ಥಾ ಕಾಂಗ್ರೆಸ್‌ನ ಎಂ.ವಿ.ರಾಜಶೇಖರ್ ಅವರನ್ನು ಬರೋಬ್ಬರಿ 186519 ಮತಗಳ ಅಂತರದಲ್ಲಿ ಸೋಲಿಸುತ್ತಾರೆ. ತಕ್ಷಣಕ್ಕೆ ಇದಕ್ಕಿಂತ ಹೆಚ್ಚಿನ ಮತಗಳನ್ನು ಬೇರೆಯವರು ಪಡೆದಿದ್ದಾರಲ್ಲ ಎಂದು ಹೇಳಬಹುದಾದರೂ, ಶೇಕಡವಾರು ಮತಗಳಿಕೆಯ ಪ್ರಮಾಣದಲ್ಲಿ ಜಾಫರ್ ಷರ್ೀ ವಿಶಿಷ್ಟ ಸಾಧನೆ ಮಾಡಿದ್ದರು.
ಅಂದು ಚಲಾವಣೆಯಾದ 313695 ಮತಗಳಲ್ಲಿ ಶೇ.79.97 ಮತಗಳನ್ನು (243987) ಷರೀಫ್ ಪಡೆದುಕೊಂಡರೆ, ಎಂ.ವಿ.ರಾಜಶೇಖರನ್ ಶೇ.18.84 ಮತಗಳನ್ನು (57468)ಪಡೆದುಕೊಂಡರು. ಇದು ಕನಕಪುರ ಕ್ಷೇತ್ರದಲ್ಲಿ ಜಾಫರ್ ಷರೀಫ್ ಮಾಡಿದ ಸಾಧನೆಯಾಗಿದ್ದು, ಈವರೆಗೂ ಇದನ್ನು ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.
ಕನಕಪುರ ಲೋಕಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದ ದಾಖಲೆ ಇರುವುದು ಕಾಂಗ್ರೆಸ್‌ನ ಎಂ.ವಿ. ಚಂದ್ರಶೇಖರ ಮೂರ್ತಿ ಅವರ ಹೆಸರಲ್ಲಿ. ಕನಕಪುರ ಕ್ಷೇತ್ರದಲ್ಲಿ ಒಟ್ಟು 6 ಬಾರಿ ಗೆಲುವು ಸಾಧಿಸಿದ್ದಾರೆ. 1977ರಿಂದ ಆರಂಭಗೊಂಡು 1991ರವರೆಗೂ ಸತತವಾಗಿ ಸೋಲಿನ ರುಚಿಯನ್ನೇ ನೋಡದೇ ಅವರು ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಲೇ ಬಂದಿದ್ದರು. ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವರಾಗಿಯೂ ಕೆಲಸ ಮಾಡಿದ್ದರು.
ನಂತರ 1996ರಲ್ಲಿ ನಡೆದ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧೆ ಮಾಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಸೋಲು ಕಾಣುವ ಎಂ.ವಿ.ಚಂದ್ರಶೇಖರ ಮೂರ್ತಿ ಮತ್ತೆ 1999ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಎಂ.ಶ್ರೀನಿವಾಸ್ ಅವರನ್ನು ಸೋಲಿಸಿ ಪುನಃ ಸಂಸತ್ ಪ್ರವೇಶ ಮಾಡುತ್ತಾರೆ. ಇದಾದ ನಂತರ 2002ರಲ್ಲಿ ನಿಧನ ಹೊಂದಿದ ನಂತರ ಈ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ ಸಂಸತ್ ಪ್ರವೇಶ ಮಾಡುತ್ತಾರೆ.
ಇನ್ನೂ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಸ್ಪರ್ಧೆ ಮಾಡಿ ಸೋತವರ ಸಾಧನೆ ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಕೇಂದ್ರದ ಮಾಜಿ ಸಚಿವರೂ ಆಗಿದ್ದ ಎಂ.ವಿ.ರಾಜಶೇಖರನ್ ಅವರ ಹೆಸರಲ್ಲಿ ಇದೆ.
ಕನಕಪುರ ಲೋಕಸಭಾ ಕ್ಷೇತ್ರದ ಮೊದಲ ಸಂಸದರಾಗಿಯೂ 1967ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಗೊಂಡಿದ್ದ ಎಂ.ವಿ.ರಾಜಶೇಖರನ್ ಅವರು ನಂತರ ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೇ ಸ್ಪರ್ಧಿಸಿ ಸೋತು ದಾಖಲೆಯನ್ನು ನಿರ್ಮಿಸಿದ್ದಾರೆ. 1967ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ಎಂ.ವಿ.ರಾಜಶೇಖರನ್ ಅವರು 1971ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಸಿ.ಕೆ.ಜಾಫರ್ ಷರೀಫ್ ಅವರ ವಿರುದ್ಧ ಸಂಸ್ಥಾ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದು ಸೋಲು ಕಂಡರು.
ಇದಾದ ನಂತರ ಎಂ.ವಿ.ರಾಜಶೇಖರ್ ಮೂರ್ತಿ ಅವರ ವಿರುದ್ಧ 1977ರಲ್ಲಿ ಭಾರತೀಯ ಲೋಕದಳ (ಬಿಎಲ್‌ಡಿ), 1980ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಸೋಲು ಕಂಡರು. ಹೀಗೆ ಸ್ಪರ್ಧೆ ಮಾಡಿದ ನಾಲ್ಕೂ ಚುನಾವಣೆಗಳಲ್ಲೂ ವಿಭಿನ್ನ ಪಕ್ಷಗಳಿಂದ ಕಣಕ್ಕೆ ಇಳಿದಿದ್ದ ಎಂ.ವಿ.ರಾಜಶೇಖರನ್ ಅವರು ಒಮ್ಮೆ ಗೆಲುವು ಮೂರು ಚುನಾವಣೆಗಳಲ್ಲಿ ಸೋಲು ಕಂಡಿದ್ದಾರೆ.
ಈಗ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರದ್ದೇ ಪಾರುಪತ್ಯ. 2008ರ ಕ್ಷೇತ್ರ ಪುರ್ನವಿಂಗಡಣೆ ನಂತರ 2009ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆಯಲ್ಲಿ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು. ನಂತರ 2013ರಲ್ಲಿ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು. ನಂತರ 2014, 2019ರಲ್ಲಿ ನಡೆದ ಲೋಕ ಸಮರದಲ್ಲಿ ಗೆಲುವು ಸಾಧಿಸಿ ಈವರೆಗೂ ಕ್ಷೇತ್ರವನ್ನು ಯಾರಿಗೂ ಬಿಟ್ಟುಕೊಟ್ಟಿಲ್ಲ. ಈ ಬಾರಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅವರು ಪ್ರಬಲ ಎದುರಾಳಿಯಾಗಿದ್ದಾರೆ.