

ಮಡಿಕೇರಿ: ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ೧೫೭ನೇ ರಾಜ್ಯ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ-೨೦೨೪ರಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ ೬೯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಪದಕ ಪಡೆದಿದ್ದಾರೆ.
ಈ ಸ್ಪರ್ಧೆಯಲ್ಲಿ ಕರ್ನಾಟಕದ ಒಟ್ಟು ೮೦ ಬ್ರೈನೋಬ್ರೈನ್ ಕೇಂದ್ರಗಳಿಂದ ಸುಮಾರು ೨೨೦೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಡಿಕೇರಿ ಬ್ರೈನೋಬ್ರೈನ್ ಕೇಂದ್ರದ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಕೇವಲ ೩ ನಿಮಿಷದಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಶೇ.೧೦೦ರಷ್ಟು ಫಲಿತಾಂಶದೊಂದಿಗೆ ೩೯ ಚಾಂಪಿಯನ್ ಟ್ರೋಫಿ, ೨೪ ಚಿನ್ನದ ಪದಕ ಮತ್ತು ೬ ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
೧೫೭ನೇ ರಾಜ್ಯ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ-೨೦೨೪ರಲ್ಲಿ ಮಡಿಕೇರಿ ಬ್ರೈನೋಬ್ರೈನ್ ಕೇಂದ್ರಕ್ಕೆ ಬೆಸ್ಟ್ ಪ್ರಾಂಚೈಸಿ ಮತ್ತು ಬೆಸ್ಟ್ ಫ್ಯಾಕಲ್ಟಿ ಪ್ರಶಸ್ತಿ ಲಭಿಸಿದ್ದು, ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಸಾಧನೆಯ ಹೆಗ್ಗಳಿಕೆಯು ತಮ್ಮ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಲ್ಲಬೇಕು. ಈ ಅದ್ಭುತ ಯಶಸ್ಸಿಗೆ ಕಾರಣಕರ್ತರಾದ ಮಕ್ಕಳಿಗೆ ಹಾಗೂ ಮುತುವರ್ಜಿ ವಹಿಸಿದ ಪೋಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ತಿಳಿಸಿದ್ದಾರೆ.
೧೫೭ನೇ ರಾಜ್ಯ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ ಸಂದರ್ಭ ಬ್ರೈನೋಬ್ರೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಅರುಣ್ ಸುಬ್ರಮಣ್ಯಂ ಹಾಗೂ ಸ್ಥಳೀಯ ವ್ಯವಸ್ಥಾಪಕ ನಿರ್ದೇಶಕ ನೀಲ್ ಕಮಾಲ್ ಸ್ವರ್ಣಾಕರ್ ಉಪಸ್ಥಿತರಿದ್ದು, ಮಡಿಕೇರಿ ಬ್ರೈನೋಬ್ರೈನ್ ಕೇಂದ್ರದ ಮಕ್ಕಳ ಅತ್ಯುತ್ತಮ ಸಾಧನೆಯನ್ನು ಶ್ಲಾಘಿಸಿದರು.