ಸಾಧನೆ ಸಾಧಕನ ಸ್ವತ್ತು, ಸೋಮಾರಿಯಲ್ಲ

Achievement is the property of the achiever, not the lazy.
ವಿಜಯಪುರದ ಎಕ್ಸಲಂಟ್​ ವಿಜ್ಞಾನ ಪ.ಪೂ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಸ್ವಾಗತ, ಪುಸ್ತಕ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಬಸವರಾಜ ಯಲಿಗಾರ, ಶಾಂತೇಶ ಕಳಸಗೊಂಡ, ಬಸವರಾಜ ಕೌಲಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ಸಾಧನೆ ಸಾಧಕನ ಸ್ವತ್ತು ಹೊರತು ಸೋಮಾರಿಯ ಸೊತ್ತಲ್ಲ. ಪ್ರತಿಯಬ್ಬರೂ ತಮ್ಮಲ್ಲಿನ ಸಾಮರ್ಥ್ಯ ಸದ್ಭಳಕೆ ಮಾಡಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗಬೇಕೆಂದು ಉಪ ಪೊಲೀಸ್​ ವಿರಿಷ್ಠಾಧಿಕಾರಿ ಬಸವರಾಜ ಯಲಿಗಾರ ಹೇಳಿದರು.

ನಗರದ ಎಕ್ಸಲಂಟ್​ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ಪುಸ್ತಕ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿ ಎಲ್ಲವನ್ನು ಸಾಧಿಸಬಲ್ಲ ಶಕ್ತಿ ಪ್ರತಿಯೊಬ್ಬರಲ್ಲೂ ಇದೆ ಎಂದರು.

ವಿದ್ಯಾರ್ಥಿಗಳು ಈಗೀಗ ಸಣ್ಣ ಸಣ್ಣ ಸೋಲುಗಳಿಗೆ ಕುಗ್ಗಿ ಹೋಗುತ್ತಿದ್ದಾರೆ. ಹೀಗಾಗಿ ದೊಡ್ಡ ಮಟ್ಟದ ಯಶಸ್ಸು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಇಲ್ಲಿಯವರೆಗೆ ನಾವು ಕೇವಲ 5 ಪ್ರತಿಶತದಷ್ಟು ಮಾತ್ರ ನಮ್ಮನ್ನು ಅರ್ಥ ಮಾಡಿಕೊಂಡಿದ್ದೇವೆ. ಇನ್ನೂ ಶೇ. 95 ರಷ್ಟು ನಮಗೆ ನಾವೇ ಅರ್ಥವಾಗದೆ ಉಳಿದಿದ್ದೇವೆ.

ನಾವು ಬೇರೆಯವರನ್ನು ನಂಬಿದಷ್ಟು ನಮ್ಮನ್ನು ನಾವು ನಂಬುತ್ತಿಲ್ಲ. ಎಲ್ಲಿಯವರೆಗೂ ತಮ್ಮ ಸಾಮರ್ಥ್ಯ ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಿಲ್ಲ ಎಂದರು.

ಸತತ ಪರಿಶ್ರಮ ಪಟ್ಟಾಗ ಮಾತ್ರ ಗೆಲುವು ಸಿಗಲಿದೆ ಎಂಬುದನ್ನು ವಿದ್ಯಾರ್ಥಿಗಳು ಮನವರಿಕೆ ಮಾಡಿಕೊಳ್ಳಬೇಕು. ಯಶಸ್ಸು ಎಂದರೆ ಅದು ರಾತ್ರೋ ರಾತ್ರಿ ಜರುಗುವ ಪವಾಡವಲ್ಲ. ಎಷ್ಟೋ ವರ್ಷಗಳ ತಪ್ಪಸ್ಸಿನ ಒಟ್ಟು ಮೊತವೇ ಯಶಸ್ಸು ಎಂದರು.

ಹೋಟೆಲ್​ ಉದ್ಯಮಿ ಶಾಂತೇಶ ಕಳಸಗೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ಶಕ್ತಿಯೇ ಜೀವನ. ನಿಶ್ಯಕ್ತಿಯೇ ಮರಣ ಎಂದಿದ್ದಾರೆ. ನನ್ನಿಂದ ಆಗುವುದಿಲ್ಲ ಎಂದು ಕುಳಿತರೆ ಏನೂ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನಾನು ಹೋಟೆಲ್​ ಕ್ಲೀನರ್​ ಆಗಿ ಇಷ್ಟೇ ನನ್ನ ಜೀವನ ಎಂದುಕೊಂಡಿದ್ದರೇ ಸದ್ಯ ನಾನು 22 ಹೋಟೆಲ್​ಗಳ ಮಾಲೀಕನಾಗುತ್ತಿರಲಿಲ್ಲ. ಇದಕ್ಕೆಲ್ಲ ಕಾರಣವಾಗಿದ್ದೇ ಧನಾತ್ಮಕ ಚಿಂತನೆ. ನೀವೂ ಧನಾತ್ಮಕವಾಗಿ ಚಿಂತನೆ ಮಾಡಿದಲ್ಲಿ ಬದುಕಿನಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ಎಕ್ಸಲಂಟ್​ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸತ್ಯ ಶೋಧನೆಯ ದಾರಿಯಲ್ಲಿ ಹೊರಟ ಸಿದ್ಧಾರ್ಥ ನನ್ನಿಂದ ಆಗದು ಎಂದು ವಾಪಸ್ಸಾಗಿದ್ದರೆ ಬುದ್ಧನಾಗುತ್ತಿರಲಿಲ್ಲ. ನಾನು ಚಿಕ್ಕವನಿದ್ದೇನೆ ನನ್ನಿಂದ ಏನಾಗುತ್ತದೆ ಎಂದು ಹಿಂದೆ ಹೆಜ್ಜೆ ಇರಿಸಿದ್ದರೆ ಹದಿನಾಲ್ಕು ವಯಸ್ಸಿನ ವೈಭವ ಸೂರ್ಯವಂಶಿ ಐಪಿಎಲ್​ನಲ್ಲಿ ದಾಖಲೆ ಬರೆಯುತ್ತಿರಲಿಲ್ಲ.

ಎಲ್ಲ ಚಾಂಪಿಯನ್​ಗಳ ಎದುರು ನಾನೇನು ಮಾಡುವುದಕ್ಕೆ ಸಾಧ್ಯ ಎಂದು ಕೈಕಟ್ಟಿ ಕುಳಿತಿದ್ದರೆ ಗುಕೇಶ ಚದುರಂಗದ ಚಾಂಪಿಯನ್​ ಆಗಿ ಹೊರ ಹೊಮ್ಮುತ್ತಿರಲಿಲ್ಲ. ಹಾಗೆಯೇ ವಿದ್ಯಾರ್ಥಿಗಳು ವಿಷಯಗಳ ಕುರಿತು ಕಬ್ಬಿಣದ ಕಡಲೆಯಾಗಿದೆ ಎಂದುಕೊಂಡರೆ ಶಿಕ್ಷಣ ಪೂರೈಸಲು ಸಾಧ್ಯವಿಲ್ಲ. ಎಲ್ಲಿ ಕಠಿಣತೆ ಇದೆಯೋ ಅಲ್ಲಿ ಶ್ರೇಷ್ಠತೆ ಇರಲಿದೆ ಎಂದು ಹೇಳಿದರು.

ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆಯ ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಪ್ರಾಚಾರ್ಯ ಶ್ರೀಕಾಂತ ಕೆ.ಎಸ್​. ಪ್ರಾಸ್ತಾವಿಕವಾಗಿ ಮಾತನಾಡಿದರು. ಎಕ್ಸಲಂಟ್​ ಪ್ರಕಾಶನ ಸಂಸ್ಥೆಯ ಪುಸ್ತಕಗಳನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು. ಶರಣಗೌಡ ಪಾಟೀಲ ಸ್ವಾಗತಿಸಿದರು. ಶ್ರದ್ಧಾ ಜಾಧವ ನಿರೂಪಿಸಿದರು. ಮುಸ್ತಾಕ ಮಲಘಾಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net