

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಧನೆ ಎಂಬುದು ಸೋಮಾರಿಗಳ ಸ್ವತ್ತಲ್ಲ. ಆತ್ಮ ವಿಶ್ವಾಸ, ದೃಢ ನಿರ್ಧಾರ ಇಚ್ಛಾಶಕ್ತಿ ಸದಾ ಕ್ರಿಯಾಶೀಲತೆಯಿಂದ ಪರಿಶ್ರಮ ಪಟ್ಟರೆ ಯಾರಾದರೂ ಸಾಧಿಸಬಹುದು ಎಂದು ಚಿಂತಕ ನಾಗರಾಜ ದ್ಯಾಮನಕೊಪ್ಪ ಹೇಳಿದರು.
ನಗರದ ಕರ್ನಾಟಕ ಹೈಸ್ಕೂಲ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಣ್ಣು ತೆರೆದರೆ ಜನನ. ಕಣ್ಣು ಮುಚ್ಚಿದರೆ ಮರಣ. ಕಣ್ಣು ತೆರೆದು ಮುಚ್ಚುವ ನಡುವೆ ಕಣ್ಣಾಡಿಸುವುದೇ ಜೀವನ. ಶತಮಾನ ಕಂಡ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಶಾಲೆಯು ಮೌಲ್ಯಗಳೊಂದಿಗೆ ದೇಶಪ್ರೇಮ, ಶ್ರದ್ಧೆ ಕಲಿಸುವುದರಲ್ಲಿ ಮುಂಚೂಣಿಯಲ್ಲಿದೆ. ಇಂತಹ ಶಾಲೆ ಮಕ್ಕಳು ಶಾಲೆಯ ಗೌರವ ಉಳಿಸುವ ಕೆಲಸ ಮಾಡಬೇಕು ಎಂದರು.
ಜಿಲ್ಲೆಯ ಶಿಕ್ಷಣ ಹಾಗೂ ತರಬೇತಿ ಸಂಸ್ಥೆ ಹಿರಿಯ ಉಪನ್ಯಾಸಕ ಅಕ್ಬರ್ ಅಲಿ ಖಾಜಿ ಮಾತನಾಡಿ, ವಿದ್ಯಾರ್ಥಿಗಳು ಕಷ್ಟ ಪಟ್ಟು ಓದದೇ ಇಷ್ಟ ಪಟ್ಟು ಓದಿ ಶಾಲೆಗೆ ಕೀರ್ತಿ ತರಬೇಕು. ಮುಂಬರುವ ದಿನಗಳಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದರು.
ಸಂಸ್ಥೆ ಕಾರ್ಯಧ್ಯಕ್ಷ ಶ್ರೀಕಾಂತ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಬೇಕು. ವಿವಿಧ ರಂಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಬೇಕು. ಹಾಗೆಯೇ ಶಾಲಾ ನಿಯಮಗಳನ್ನು ಪಾಲಿಸುವುದರ ಜತೆಗೆ ಆಂತರಿಕ ಶಿಸ್ತು ಹೊಂದಿ, ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಶಾಲಾ ಆಡಳಿತ ಅಧಿಕಾರಿ ಜಿ.ಆರ್. ಭಟ್ ಮಾತನಾಡಿದರು. 2023ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು. ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಮಹಾಂತೇಶ ಶೀಲವಂತ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪ್ರಾಂಶುಪಾಲ ಎನ್.ಎನ್. ಸವಣೂರ, ಶಿಕ್ಷಕ ರಮೇಶ ಮೂಲಿಮನಿ, ಹಿರಿಯ ಶಿಕ್ಷಕರಾದ ಬಿ.ಬಿ. ಶಿಂಗೆ, ಕೆ.ಸಿ. ಪ್ರಕಾಶ, ಶಿವಲೀಲಾ ಹಾತರಕಿ, ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಂ. ಬೋಂಗಾಳೆ, ಇತರರು ಇದ್ದರು.