ಆಧುನಿಕ ಪದ್ಧತಿಯ ಕೃಷಿಯಿಂದ ಸಾಧನೆ ಸಾಧ್ಯ

ಆಧುನಿಕ ಪದ್ಧತಿಯ ಕೃಷಿಯಿಂದ ಸಾಧನೆ ಸಾಧ್ಯ
Published on

ಹಾಸನ; ಕೃಷಿಯಲ್ಲಿ ಆಧುನಿಕ ತಾಂತ್ರಿಕತೆ ಅಳವಡಿಸಿಕೊಂಡು, ಆಧುನಿಕ ಪದ್ಧತಿಯಲ್ಲಿ ಕೃಷಿ ಮಾಡಿದರೆ ಸಾಧನೆ ಮಾಡಬಹುದು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಪ್ರಗತಿಪರ ಕೃಷಿಕ ಡಾ.ಎಂ.ಸಿ.ರಂಗಸ್ವಾಮಿ ಹೇಳಿದರು.

ನಗರದ ಕೃಷಿ ಇಲಾಖೆ ಸಭಾಂಗಣದಲ್ಲಿ ಗುರುವಾರ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬಂಗಾರದ ಮನುಷ್ಯ ಚಿತ್ರವೇ ನನಗೆ ಕೃಷಿಕನಾಗಲು ಸ್ಫೂರ್ತಿ. ತುಂಬ ಜನರು ನನ್ನನ್ನು ಸರ್ಕಾರಿ ಅಧಿಕಾರಿ ಆಗುವಂತೆ ಒತ್ತಾಯ ಮಾಡಿದರು. ಆದರೆ ಕೃಷಿ ಮಾಡಬೇಕು ಎಂದು ದೃಢ ಸಂಕಲ್ಪ ಮಾಡಿದೆ. ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ಎಲ್ಲ ಬೆಳೆ ಬೆಳೆಯಲಾಗಿದೆ. ಇಡೀ ದೇಶದಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು 80 ಸಾವಿರ ಕೆ.ಜಿ. ಹೊಗೆಸೊಪ್ಪು ಬೆಳೆದು ದಾಖಲೆಯಾಗಿದೆ. ಪಾಲಿ ಹೌಸ್ ಅನ್ನು ನಾನು ಮೊದಲು ಕಂಡು ಹಿಡಿದಿದ್ದು, ಇದೀಗ ಎಲ್ಲರೂ ಈ ಪದ್ಧತಿ ಬಳಸುತ್ತಿದ್ದಾರೆ. ಹೊಸ ತಳಿಗಳನ್ನು ಕೃಷಿ ಮಾಡಿ ಯಶಸ್ಸು ಗಳಿಸಲಾಯಿತು. ಕೃಷಿಯಲ್ಲಿ ಕೆಲವೊಮ್ಮೆ ನಷ್ಟ ಅನುಭವಿಸಬಹುದು. ಆದರೆ ರೈತರು ಧೃತಿಗೆಡದೆ ಕೃಷಿ ಕಾಯಕ ಮಾಡಬೇಕು. ಪ್ರತಿಯೊಬ್ಬ ರೈತನು ತಾನೇ ವಿಜ್ಞಾನಿ ಆಗಬೇಕು. ಜಮೀನಿನಲ್ಲಿ ಸೂಕ್ತ ರಸ್ತೆ ಸೇರಿದಂತೆ ಸೂಕ್ತ ವ್ಯವಸ್ಥೆ ಮಾಡಿಕೊಂಡು ಕೃಷಿ ಮಾಡಬೇಕು. ಕೃಷಿಯಲ್ಲಿ ಸಾಕಷ್ಟು ಏಳು ಬೀಳುಗಳನ್ನು ನೋಡಿದ್ದೇನೆ. ಯಾವುದೇ ಪ್ರಶಸ್ತಿಗಾಗಿ ನಾನು ಕೃಷಿ ಮಾಡಿಕೊಂಡು ಬರಲಿಲ್ಲ. ಅರ್ಜಿ ಹಾಕದೆ ಇಂದು ನನಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಸರ್ಕಾರ ನನ್ನ ಮೇಲೆ ಜವಾಬ್ದಾರಿ ಹೆಚ್ಚಿಸಿದೆ. ಯುವ ಸಮುದಾಯ ಕೇವಲ ಸಣ್ಣ ಪುಟ್ಟ ಕೆಲಸಕ್ಕೆ ಸೀಮಿತರಾಗದೆ, ತಮ್ಮ ಕುಟುಂಬದಲ್ಲಿ ಜಮೀನಿದ್ದರೆ ಆಧುನಿಕ ಕೃಷಿಯಲ್ಲಿ ತೊಡಗಿಕೊಂಡು ಯಶಸ್ಸು ಕಾಣಬೇಕು. ಜೀವನದಲ್ಲಿ ಶಿಸ್ತು, ದೃಢಸಂಕಲ್ಪ, ಶ್ರಮ ವಹಿಸಿ ದುಡಿದರೆ ಯಾವುದೇ ಕೆಲಸವಾದರೂ ಯಶಸ್ಸು ಕಾಣಲು ಸಾಧ್ಯ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಮೇಶ್, ಕೃಷಿ ಇಲಾಖೆಯ ಸುಧಾಕರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net