ಸಂಸ್ಕಾರಯುತ ಶಿಕ್ಷಣದಿಂದ ಸಾಧನೆ ಸಾಧ್ಯ

AKR BHAGAT
Published on

ಅಕ್ಕಿಆಲೂರ: ವಿದ್ಯಾರ್ಥಿಗಳು ತಾವೇ ಕೌಶಲ ವೃದ್ಧಿಸಿಕೊಂಡು ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಆಧುನಿಕತೆಯ ಈ ಯುಗದಲ್ಲಿ ಜ್ಞಾನಕ್ಕೆ ಹೆಚ್ಚು ಬೆಲೆ ಇದೆ ಎಂದು ಹಾನಗಲ್ಲ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಸ್. ಆನಂದ ಹೇಳಿದರು.

ಪಟ್ಟಣದ ಹಾನಗಲ್ಲ ತಾಲೂಕು ಶಿಕ್ಷಣ ಸಂಘದ ಎಸ್. ಭಗತ್ ಸಿಂಗ್ ಪಿಯು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಭಗತ್ ಅಭ್ಯುದಯ ಹಾಗೂ ‘ವಿಜಯವಾಣಿ’ ವಿದ್ಯಾರ್ಥಿಮಿತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಶಿಕ್ಷಣದ ಜತೆಗೆ ಮಾನವೀಯತೆ ಮತ್ತು ನೈತಿಕತೆಯ ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆಯೂ ಇದೆ. ಶಿಕ್ಷಣ, ಅಂಕ ಮತ್ತು ಪರೀಕ್ಷೆ ಮಾತ್ರ ನಮ್ಮ ಜೀವನವನ್ನು ನಿರ್ಧರಿಸುತ್ತದೆ ಎಂಬುದು ಸುಳ್ಳು. ಪ್ರತಿಯೊಬ್ಬರಲ್ಲೂ ವಿಶೇಷ ಪ್ರತಿಭೆ ಇರುತ್ತವೆ. ನಮ್ಮಲ್ಲಿರುವ ಕೀಳರಿಮೆಯನ್ನು ತೊಡೆದು ಹಾಕಬೇಕು. ಮತ್ತೊಬ್ಬರಿಗೆ ಹೋಲಿಕೆ ಮಾಡಿಕೊಂಡು ಹಿಂಸೆ ಪಡುವ ಮನಸ್ಥಿತಿಯಿಂದ ಹೊರಬರಬೇಕು ಎಂದರು.

ಹಾನಗಲ್ಲ ತಾಲೂಕು ಶಿಕ್ಷಣ ಸಂಘದ ಅಧ್ಯಕ್ಷ ಮನೋಜ ದೇಸಾಯಿ ಮಾತನಾಡಿ, ಶಿಕ್ಷಣದಲ್ಲಿ ಸಂಸ್ಕಾರ ದೊರೆಯಬೇಕು. ಹಿಂದೆ ಗುರುಕುಲ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಾಸಗೊಳಿಸುತ್ತಿದ್ದವು. ಹೆಚ್ಚು ಅಂಕಗಳ ಜತೆಗೆ ಅವಿಸ್ಮರಣೀಯ ವ್ಯಕ್ತಿತ್ವ ನಮ್ಮದಾಗಬೇಕು ಎಂದರು.

ಮುಖಂಡ ಡಾ.ಪ್ರಕಾಶಗೌಡ ಪಾಟೀಲ, ಡೊಳ್ಳೇಶ್ವರದ ಪ್ರಗತಿಪರ ರೈತ ಶ್ರೀಧರ ಆರೇರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಮಿತ್ರ ವಿತರಿಸಿದರು.

ಹಾನಗಲ್ಲ ತಾಲೂಕು ಶಿಕ್ಷಣ ಸಂಘದ ಕಾರ್ಯದರ್ಶಿ ಎಸ್. ಸಿ ಪಾವಲಿ, ಉದಯಕುಮಾರ ವಿರೂಪಣ್ಣನವರ, ಭಗತ್ ಸಿಂಗ್ ಕಾಲೇಜ್ ಸಂಸ್ಥಾಪಕ ಎಂ.ಬಿ. ಸತೀಶ, ಮಹೇಶ ವಿರೂಪ್ಪಣ್ಣವರ, ಕುಮಾರ ಧಾರವಾಡ, ಸಿದ್ದಣ್ಣ ಸಿಂಧೂರ, ಆರ್.ವಿ. ಕೋರಿ, ಉಪನ್ಯಾಸಕರಾದ ರುಕ್ಷಾನ ಭಾನು ಹುಬ್ಬಳ್ಳಿ, ಆಸ್ಮಾ ತಳಕಲ್ಲ, ಸಾಯಿಪೂಜಾ ಬಿ.ಎಚ್., ಭುವನೇಶ್ವರಿ ಲಂಬಿ, ಜ್ಯೋತಿ ಭೊವೇರ, ಸವಿತಾ ಮೂಲಿಮನಿ, ಅಲ್ತಾಫ್ ಎಂ.ಬಿ. ದೀಪಾ ಜೋಗಿಹಳ್ಳಿ, ರಾಜೇಶ್ವರಿ ಮಳಿಯಣ್ಣನವರ, ಪುಷ್ಪಾ ಕಡೂರ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net