

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳು ಸಮಯ ವ್ಯರ್ಥ್ಯ ಮಾಡದೆ ಉತ್ತಮ ಅಭ್ಯಾಸ ನಡೆಸಬೇಕು. ಸತತ ಪ್ರಯತ್ನದಿಂದ ಉತ್ತಮ ಶಿಕ್ಷಣ ಪಡೆದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಕೆ.ಇ. ಬೋರ್ಡ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಹೇಳಿದರು.
ನಗರದ ವಿದ್ಯಾರಣ್ಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ದಾನಿಗಳು ನೀಡಿರುವ ಧನ ಸಹಾಯದಿಂದ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಕ್ಕಂತಾಗಿದೆ. ಮಕ್ಕಳು ಉತ್ತಮ ಶಿಕ್ಷಣ, ಸಂಸ್ಕಾರ ಪಡೆಯುವಲ್ಲಿ ಪಾಲಕರ ಪಾತ್ರ ಅತ್ಯಂತ ಮುಖ್ಯವಾಗಿದೆ. ಹೀಗಾಗಿ ಪಾಲಕರು ತಮ್ಮ ಪಾತ್ರವನ್ನು ಸರಿಯಾಗಿ ನಿಭಾಯಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ ಮಾತನಾಡಿ, ಬಂಡೆಗಲ್ಲಿನಂತೆ ನಮ್ಮ ಶಾಲೆಗೆ ಬರುವ ಮಕ್ಕಳನ್ನು ಶಿಕ್ಷಕರು ಉತ್ತಮ ಮೂರ್ತಿಯಾಗಿ ತಯಾರಿಸುತ್ತಾರೆ. ಸಹಪಾಠಿಗಳ ಆಯ್ಕೆ ಸರಿಯಾಗಿರಬೇಕು. ಎಲ್ಲರ ಸಹಕಾರದಿಂದ ಸಾಧನೆ ಮಾಡಲು ಸಾಧ್ಯ ಎಂದರು.
ಶಿಕ್ಷಕರಾದ ಎ.ಆರ್. ಹದ್ಲಿ, ಎಸ್.ವಿ. ಪೋತದಾರ, ಯು.ಎನ್. ಕುಲಕರ್ಣಿ, ಕಾಲೇಜಿನ ಪ್ರಾಚಾರ್ಯೆ ಶರಣಮ್ಮಾ ಗೋರೆಬಾಳ, ಎಸ್.ಡಿ. ಹಡಪದ, ಶಾಲಾ ಪ್ರಧಾನಿ ಚಂದ್ರಿಕಾ ಭಕ್ಷಿ, ವಿದ್ಯಾರ್ಥಿಗಳು, ಇತರರು ಇದ್ದರು. ಶಾಲೆ ಪ್ರಾಚಾರ್ಯೆ ಸಿಂಧು ಶಿರೂರ ಸ್ವಾಗತಿಸಿದರು. ಎಂ.ಪಿ. ಶಿಂಧೆ ಹಾಗೂ ಕಾವೇರಿ ಗಡಾದ ನಿರೂಪಿಸಿದರು. ವಿ.ಆರ್. ಮೂಲಿಮನಿ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.