

ನರಗುಂದ: ಏಕಾಗ್ರತೆಗೆ ನಿರಂತರ ಅಭ್ಯಾಸ ಬಲವೇ ಪ್ರಮುಖ ಸಾಧನ. ಮತ್ತೆ ಮತ್ತೆ ಓದುವುದು, ಬರೆಯುವುದರಿಂದ ಸ್ಮರಣಶಕ್ತಿ ಹೆಚ್ಚಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಅಭಿಪ್ರಾಯಪಟ್ಟರು.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪದ ವತಿಯಿಂದ ತಾಲೂಕಿನ ಬನಹಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳಿಗೆ ಮಂಗಳವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರದ್ಧೆ, ಉತ್ಸಾಹದಿಂದ ಬುದ್ಧಿ ಉಪಯೋಗಿಸಿ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು. ವಿನಾಕಾರಣ ಸಮಯ ಹಾಳು ಮಾಡಬಾರದು. ಈಗಾಗಲೇ ಸಿ ಗ್ರೇಡ್ ವಿದ್ಯಾರ್ಥಿಗಳಿಗಾಗಿ ತಾಲೂಕಿನಲ್ಲಿ ಪರೀಕ್ಷಾ ಸುಧಾರಣೆಗಾಗಿ ಕೇಂದ್ರಗಳನ್ನು ಸ್ಥಾಪಿಸಿದ್ದು, ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸಲಾಗುತ್ತಿದೆ. ಪಾಲಕರ ಸಭೆ ಕರೆದು ಮಕ್ಕಳ ಬಗ್ಗೆ ನಿರಂತರ ಕಾಳಜಿ ವಹಿಸುವಂತೆ ಸಲಹೆ ನೀಡಲಾಗಿದೆ ಎಂದರು.
ವೀರಣ್ಣ ಒಡ್ಡೀನ ಮಾತನಾಡಿ, ಅಧ್ಯಯನ ಒಂದು ವ್ರತವಿದ್ದಂತೆ. ವಿದ್ಯಾರ್ಥಿಗಳು ವ್ರತಧಾರಿಗಳಾಗಿ ಎಲ್ಲ ವಿಷಯಗಳನ್ನು ಅಧ್ಯಯನ ಮಾಡಬೇಕು. ಓದಿನ ಜತೆಗೆ ಬರವಣಿಗೆಗೂ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಪ್ರಶಾಂತ ಪಾಟೀಲ ಮಾತನಾಡಿ, ‘ಚರ್ಚೆ, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರಿಂದ ಹೆಚ್ಚು ಅಂಕ ಗಳಿಸಲು ಸಾಧ್ಯ. ಪಠ್ಯ-ಪುಸ್ತಕ ಹೊರತು ಗೈಡ್ ಹಾಗೂ ಡೈಜಸ್ಟ್‌ಗಳನ್ನು ಉಪಯೋಗಿಸಬಾರದು ಎಂದರು.
ಬನಹಟ್ಟಿ ಕೆಪಿಎಸ್ ಶಾಲೆ ಪ್ರಾಚಾರ್ಯ ಕೆ.ಎಂ. ಹುದ್ದಾರ ಮಾತನಾಡಿದರು. ಪರಮೇಶ, ಕವಿತಾ ಶಿರಿಯಣ್ಣವರ, ಅನ್ನಪೂರ್ಣಾ, ಸಂಗನಗೌಡ ಪಾಟೀಲ, ಎಸ್.ಎನ್. ಗಡೇಕಾರ ಇತರರಿದ್ದರು. ಉಪ ಪ್ರಾಚಾರ್ಯ ಎಸ್.ವೈ. ಪಾಟೀಲ ಸ್ವಾಗತಿಸಿದರು. ಗೀತಾ ಪೂಜಾರ ನಿರೂಪಿಸಿದರು. ಸಿ.ಜಿ. ಖಾನಾಪೂರ ವಂದಿಸಿದರು.