ಉನ್ನತ ಶಿಕ್ಷಣದ ಮೂಲಕ ಸಾಧನೆ ಸಾಧ್ಯ

16 KRN-1
Published on

 ಕೆ.ಆರ್.ನಗರ: ವಿದ್ಯಾರ್ಥಿಗಳು ಬಯಸಿದ್ದನ್ನು ಶಿಕ್ಷಣದ ಮೂಲಕ ಸಾಧಿಸಬಹುದು. ಇದಕ್ಕೆ ಕಠಿಣ ಪರಿಶ್ರಮದೊಂದಿಗೆ ಉತ್ತಮ ಮತ್ತು ಉನ್ನತ ಶಿಕ್ಷಣ ಅವಶ್ಯಕ ಎಂದು ಶಾಸಕ ಡಿ.ರವಿಶಂಕರ್ ಕಿವಿಮಾತು ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಯುವ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಕಾಲೇಜಿನ ದಿನಗಳು ಅತ್ಯಂತ ಪ್ರಮುಖವಾದ ಘಟ್ಟ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ತೆಗೆದುಕೊಳ್ಳುವ ನಿರ್ಧಾರ ಮತ್ತು ಕೈಗೊಳ್ಳುವ ನಿಷ್ಕಲ್ಮಶ ಚಟುವಟಿಕೆಗಳು ಜೀವನವನ್ನು ನಿರ್ಧರಿಸಲಿದ್ದು, ಎಲ್ಲರೂ ಸ್ವತಂತ್ರವಾಗಿ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.

ಬಲಿಷ್ಠ ಭಾರತ ನಿರ್ಮಾಣಕ್ಕೆ ಯುವ ಜನತೆ ಕಟಿಬದ್ಧರಾಗಿ ಕೆಲಸ ಮಾಡಬೇಕಾಗಿದ್ದು, ಇದಕ್ಕೆ ಗುರುಗಳು, ಪಾಲಕರು ಮತ್ತು ಹಿರಿಯ ಮಾರ್ಗದರ್ಶನ ಪಡೆಯಬೇಕು. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕೆ.ಆರ್.ನಗರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ತರಗತಿಗಳನ್ನು ಪ್ರಾರಂಭಿಸುತ್ತಿದ್ದು, ಆಸಕ್ತರು ಇದರ ಅನುಕೂಲ ಪಡೆಯಿರಿ. ಮುಂದಿನ ದಿನಗಳಲ್ಲಿ ಕಾಲೇಜನ್ನು ಉನ್ನತ ಸ್ಥಾನಕೇರಿಸಲು ಕಾರ್ಯ ಯೋಜನೆಯನ್ನು ಹಮ್ಮಿಕೊಂಡಿದ್ದೇನೆ ಎಂದು ಪ್ರಕಟಿಸಿದರು.

ರಾಷ್ಟೀಯ ಮತ್ತು ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ ನಡೆಸಲು ಕ್ರೀಡಾಂಗಣವನ್ನು ಸಮತ್ತಟ್ಟು ಮಾಡಿಸುವುದಾಗಿ ಭರವಸೆ ನೀಡಿದರು. ಕಾಲೇಜು ಆವರಣದಲ್ಲಿ ಶಿಥಿಲಗೊಂಡಿರುವ ಕಟ್ಟಡಗಳನ್ನು ನೆಲಸಮಗೊಳಿಸಿ 16 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿ, ಅಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

ಕಾಲೇಜಿನ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ತಿ.ನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ರೇಷ್ಮಚಂಗಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ಎಚ್.ಪಿ.ಪ್ರಶಾಂತ್, ಪ್ರಾಂಶುಪಾಲ ಡಾ.ಬಿ.ಎಸ್.ಜಯಾ, ಸಾಂಸ್ಕೃತಿಕ ಸಮಿತಿ ಸಂಚಾಲಕ ಕೆ.ಆರ್.ದೀಕ್ಷೀತ್ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಚ್.ಎಸ್.ವೇಣುಗೋಪಾಲ್, ನಟರಾಜು, ಬೆಟ್ಟನಾಯಕ, ಸನ್ನಾಉಲ್ಲಾಖಾನ್, ತಿಮ್ಮಯ್ಯ, ಕೆ.ಎಲ್.ರಾಜೇಶ್, ಶಂಕರ್, ಉಪನ್ಯಾಸಕರಾದ ಕೆ.ಎನ್.ಮೋಹನ್, ಕಿರಣ್ ಕುಮಾರ್, ರಾಘವೇಂದ್ರ, ನಿಸಾರ್ ಖಾನ್, ಡಾ.ಎ.ಸುಮಾ, ಡಾ.ತಿಪ್ಪೆಸ್ವಾಮಿ, ಡಾ.ಎಲ್.ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net