

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಯುತ ಗುಣಗಳನ್ನು ಹೊಂದಿರಬೇಕು. ಸತತ ಪರಿಶ್ರಮಪಟ್ಟರೆ ಸಾಧನೆ ಸಾಧ್ಯ ಎಂದು ಸಂವಹನ ತರಬೇತುದಾರ ಪ್ರೊ. ಪ್ರಶಾಂತ ಮುಟಗಿ ಹೇಳಿದರು.
ನಗರದ ಕರ್ನಾಟಕ ಕಲಾ ಕಾಲೇಜಿನ ಇಂಗ್ಲಿಷ್ ಅಧ್ಯಯನ ವಿಭಾಗ ವತಿಯಿಂದ ಕಾಲೇಜಿನಲ್ಲಿ ಏರ್ಪಡಿಸಿದ್ದ ಇಂಗ್ಲಿಷ್ ವಿಭಾಗದ ಸ್ಟಡಿ ಸರ್ಕಲ್ ಚಟುವಟಿಕೆಗಳ ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂಗ್ಲಿಷ್ ಅಧ್ಯಯನದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ಪಠ್ಯದ ಜತೆಗೆ ಸಾಹಿತ್ಯ ಕೃತಿಗಳನ್ನು ಓದುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು. ಉತ್ತಮ ಸಂವಹನ ಕೌಶಲ ಅಳವಡಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ ಮಾತನಾಡಿ, ಇಂಗ್ಲಿಷ್ ವಿಷಯ ಒಳ್ಳೆಯ ಹಾಗೂ ಹೆಚ್ಚು ಅವಕಾಶ ಇರುವ ವಿಷಯವಾಗಿದೆ. ಜಾಗತಿಕ ಭಾಷೆಯಾಗಿರುವ ಇಂಗ್ಲಿಷ್ ಅನ್ನು ಎಲ್ಲರೂ ಅಧ್ಯಯನ ಮಾಡಬೇಕು ಎಂದರು.
ಡಾ.ಮುಕುಂದ ಲಮಾಣಿ ಮಾತನಾಡಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ. ಕಾಂಚನಾ ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಡಾ. ವಿಭಾ ಕುಲಕರ್ಣಿ, ಪ್ರೊ. ಐ.ಸಿ. ಮುಳುಗುಂದ, ಶಿಕ್ಷಕರು, ಇತರರು ಇದ್ದರು.