

ಮುಳಬಾಗಿಲು: ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಯ ಭವಿಷ್ಯ ರೂಪಿಸಿಕೊಳ್ಳಲು ತುಂಬಾ ಮಹತ್ವವಾದ ಕಾಲಘಟ್ಟವಾಗಿದೆ. ಆದ್ದರಿಂದ ಇಲ್ಲಿ ವಿದ್ಯಾರ್ಥಿಗಳು ತುಂಬಾ ಜಾಗೂರಕತೆಯಿಂದ ತಮ್ಮ ವಿದ್ಯಾಭ್ಯಾಸ ಮಾಡಲು ಮುಂದಾಗಬೇಕೆಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ಸಲಹೆ ನೀಡಿದರು.
ನಗರದ ನೇತಾಜಿ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಲ್ಲಿನ ವಿದ್ಯಾಭ್ಯಾಸಕ್ಕೆ ಕಾಲಿಡುವ ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಹದಿ ಹರಿಯದ ವಯಸ್ಸಿನಿಂದ ಬಂದಿರುತ್ತಾರೆ. ಹಾಗಾಗಿ ತಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಚಂಚಲ ಮನಸ್ಸಿನಿಂದ ಇಲ್ಲಸಲ್ಲದ ಕೆಲಸ ಕಾರ್ಯಗಳಿಗೆ ಮುಂದಾಗುತ್ತಾರೆ. ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ವಿದ್ಯಾಭ್ಯಾಸ ಮಾಡಿದವರು ಉನ್ನತ ಸ್ಥಾನಕ್ಕೆ ಹೋಗಬಹುದು ಎಂಬುದನ್ನು ಯಾರು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ತಾಲೂಕಿನಲ್ಲಿ ಈಗಾಗಲೇ ಐಎಎಸ್, ಕೆಎಎಸ್ ಸೇರಿ ನಾನಾ ಇಲಾಖೆಗಳಲ್ಲಿ ಸಾವರಾರು ಮಂದಿ ಸೇವೆ ಮಾಡುತ್ತಿದ್ದಾರೆ. ಇವರಿಂದ ನಮ್ಮ ತಾಲೂಕಿಗೆ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಉತ್ತಮ ಹೆಸರು ಬಂದಿದೆ. ಇವರೆಲ್ಲರನ್ನು ಆದರ್ಶವಾಗಿ ಮತ್ತು ಸ್ಫೂರ್ತಿ ಪಡೆದುಕೊಂಡು ಈ ನಿಟ್ಟಿನಲ್ಲಿ ಇವತ್ತಿನ ಯುವಜನತೆ ವಿದ್ಯಾಭ್ಯಾಸ ಮಾಡಿ ತಾಲೂಕಿಗೆ ಮತ್ತಷ್ಟು ಹೆಸರನ್ನು ತಂದು ಕೊಡಬೇಕೆಂದು ಮನವಿ ಮಾಡಿದರು.
ತಾಲೂಕಿನ ನಾನಾ ಕಡೆಗಳಿಂದ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಬಗೆಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಶಾಸಕ ಸಮೃದ್ಧಿ ವಿ.ಮಂಜುನಾಥ ಅವರು ಕ್ರೀಡಾಜ್ಯೋತಿ ಸ್ವೀಕರಿಸಿದರು. ಕಾಲೇಜು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.