

ಗೋಣಿಕೊಪ್ಪಲು: ಜೀವನದಲ್ಲಿ ಗುರಿ ಇದ್ದಲ್ಲಿ ಮಾತ್ರ ನಮ್ಮ ಮುಂದಿನ ಸಾಧನೆ ತಲುಪಲು ಸಾಧ್ಯ. ಪ್ರತಿ ವಿದ್ಯಾರ್ಥಿಯಲ್ಲಿಯೂ ವಿಶೇಷವಾದ ಪ್ರತಿಭೆಗಳಿದ್ದು ಅವುಗಳನ್ನು ಹೊರಸೂಸಲು ಅವಕಾಶ ಲಭಿಸಿದ ಸಂದರ್ಭದಲ್ಲಿ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಳತ್ಮಾಡುವಿನ ಲಯನ್ಸ್ ವಿದ್ಯಾ ಸಂಸ್ಥೆಯ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಸಾಧನೆಗಳನ್ನು ಮಾಡಲು ಪೂರಕ ವ್ಯವಸ್ಥೆಗಳಿವೆ. ವಿದ್ಯಾರ್ಥಿಗಳಿಗೆ ಶಿಕ್ಷಕರು ಉತ್ತಮ ತರಬೇತಿಗಳನ್ನು ಸಕಾಲದಲ್ಲಿ ನೀಡುತ್ತಾರೆ. ಇದರಿಂದ ನಮ್ಮ ಗುರಿಗಳನ್ನು ತಲುಪಲು ವಿಪುಲ ಅವಕಾಶಗಳಿವೆ. ಈ ಹಿಂದೆ ಅವಕಾಶಗಳು ಕಡಿಮೆ ಇದ್ದವು. ಆದರೂ ಇರುವ ಸೌಲಭ್ಯಗಳಲ್ಲಿಯೇ ಸಾಧನೆಗಳನ್ನು ಮಾಡುವ ಮೂಲಕ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳು ತಮ್ಮ ಛಾಪನ್ನು ಮೂಡಿಸಿದ್ದಾರೆ. ವಿದ್ಯಾರ್ಥಿಗಳು ಹಿರಿಯರ ಮಾರ್ಗದರ್ಶನ ಹಾಗೂ ಶಿಕ್ಷಕರ ನಿರ್ದೇಶನದಂತೆ ಕೆಲಸ ನಿರ್ವಹಿಸಬೇಕು. ಓದಿನೊಂದಿಗೆ ಕ್ರೀಡೆಯಲ್ಲಿಯೂ ತಮ್ಮ ಪಾಲ್ಗೊಳ್ಳುವಿಕೆ ಅಗತ್ಯವಿದೆ. ಇದರಿಂದ ದೈನಂದಿನ ಚಟುವಟಿಕೆ ಚುರುಕಾಗಲಿವೆ ಎಂದರು.
ಗೋಣಿಕೊಪ್ಪ ಲಯನ್ಸ್ ಪ್ರಾಥಮಿಕ ಶಾಲೆ, ಕಳತ್ಮಾಡು ಲಯನ್ಸ್ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡೋತ್ಸವದ ಅಂಗವಾಗಿ ಪಥಸಂಚಲನದಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು. ಎನ್‌ಸಿಸಿ ಕೆಡೆಟ್‌ಗಳು ಸೇರಿದಂತೆ ವಿವಿಧ ತಂಡಗಳು ಪಥ ಸಂಚಲನದಲ್ಲಿ ಸಾಗಿ ಬಂದವು. ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.
ಲಯನ್ಸ್ ಕ್ಲಬ್ ಟ್ರಸ್ಟ್‌ನ ಚೇರ‌್ಮನ್ ಪಿ.ಎನ್.ಪೆಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಉಪಾಧ್ಯಕ್ಷ ಧನು ಉತ್ತಯ್ಯ, ಟ್ರಸ್ಟಿಗಳಾದ ಶರತ್ ದೇವಯ್ಯ, ಡಾ.ಸೂರಜ್ ಉತ್ತಪ್ಪ, ಗೋಣಿಕೊಪ್ಪ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಸಿ.ಟಿ.ಅಪ್ಪಣ್ಣ, ಕಾರ್ಯದರ್ಶಿ ಶ್ರೀಮಂತ್ ಮುತ್ತಣ್ಣ, ಲಯನ್ಸ್ ಕಾಲೇಜಿನ ಪ್ರಾಂಶುಪಾಲೆ ಸಿ.ಬಿ.ಲತಾ, ಪ್ರೌಢಶಾಲಾ ಮುಖ್ಯಶಿಕ್ಷಕಿ ಸಿ.ಎಸ್.ಗಾನಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ತಂಗಮ್ಮ, ಕ್ರೀಡಾ ನಾಯಕರಾದ ಸುಷ್ಮಾದಾಸ್, ನಿಖಿತ್ ನಾಚಪ್ಪ, ತಸನ್ ಸುಬ್ಬಯ್ಯ ಉಪಸ್ಥಿತರಿದ್ದರು.