

ನಂಜನಗೂಡು: ವಿದ್ಯಾರ್ಥಿ ಜೀವನದಲ್ಲಿ ಕಠಿಣ ತಪಸ್ಸಿನಂತೆ ವಿದ್ಯಾರ್ಜನೆಯಲ್ಲಿ ತೊಡಗಿಕೊಂಡರೆ ಉನ್ನತ ಸ್ಥಾನ ಪಡೆಯಬಹುದು ಎಂದು ಮುರುಗೀ ಮಠದ ಇಮ್ಮಡಿ ಮುರುಗೀ ಸ್ವಾಮೀಜಿ ಹೇಳಿದರು.
ತಾಲೂಕಿನ ಮಲ್ಲನಮೂಲೆ ಮಠದ ಸಭಾಂಗಣದಲ್ಲಿ ಭಾನುವಾರ ಬಸವ ಸೇವಾ ಸಮಿತಿ ಹಾಗೂ ವೀರಶೈವ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದಿಸೆಯಲ್ಲಿ ತನ್ನನ್ನು ತಾನು ಬದಲಿಸಿಕೊಂಡು, ಶಿಸ್ತನ್ನು ಮೈಗೂಡಿಸಿಕೊಂಡರೆ ಉತ್ತಮ ಸಾಧನೆ ಸಾಧ್ಯ. ಡಾಂಭಿಕತೆ ಬಿಟ್ಟು ನೈಜತೆಯಿಂದ ನಡೆದು ಬದಕನ್ನು ಸಾರ್ಥಕಗೊಳಿಸಿಕೊಳ್ಳಬಹುದು ಎಂದು ಹೇಳಿದರು.
ಜಿಲ್ಲಾ ವೀರಶೈವ ನೌಕರರ ಸಂಘದ ಅಧ್ಯಕ್ಷ ಆಲೂರು ಬಸವರಾಜು ಮಾತನಾಡಿ, ಇಂದಿನ ಸಂದರ್ಭದಲ್ಲಿ ಸಮಾಜದ ಮೇಲೆ ಹೊರಗಿನ ಸಂಸ್ಕೃತಿಯ ಹೊಡೆತ ಬೀಳುತ್ತಿದೆ. ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಅನುಸರಿಸುವ ಮೂಲಕ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಹೆಚ್ಚಿದೆ. ವಿದ್ಯಾರ್ಥಿಗಳು ಜ್ಞಾನದಾಹಿಗಳಾಗಬೇಕು. ಜ್ಞಾನಕ್ಕೆ ಮಹತ್ವ ನೀಡಿದರೆ ಉನ್ನತ ಸ್ಥಾನ ಪಡೆಯಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ನಿವೃತ್ತ ನೌಕರರು ಹಾಗೂ ವಿದ್ಯಾರ್ಥಿಗಳಿಗೆ ನಗದು ಪುಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಲ್ಲನಮೂಲೆ ಮಠದ ಚೆನ್ನಬಸವ ಸ್ವಾಮೀಜಿ, ಶರಣ ಸಂಗಮ ಮಠದ ನಾಗರಾಜೇಂದ್ರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾ ಸಭಾ ತಾಲ್ಲೂಕು ಅಧ್ಯಕ್ಷ ಎಸ್. ಎಂ.ಕೆಂಪಣ್ಣ, ಬಸವ ಸೇವಾ ಸಮಿತಿಯ ಅಧ್ಯಕ್ಷ ಜಿ.ಎಲ್.ಸೋಮಣ್ಣ, ಡಿ.ವಿ. ಚಂದ್ರಶೇಖರ್ ದೇವನೂರು, ಶಿವಕುಮಾರ್, ಎಂ.ಎಸ್.ನಾಗೇಂದ್ರ, ಶಂಕರ್ ಪ್ರಸಾದ್, ಕುಮಾರಸ್ವಾಮಿ ಉಪಸ್ಥಿತರಿದ್ದರು.