

ತರೀಕೆರೆ: ಮಕ್ಕಳಿಗೆ ಉತ್ತೇಜನ ನೀಡಿದರೆ ಎಲ್ಲ ಕ್ಷೇತ್ರದಲ್ಲಿನ ಸಾಧನೆ ಸುಲಭ ಎಂದು ಗ್ರಾಪಂ ಅಧ್ಯಕ್ಷ ಎನ್.ರಾಮೇಗೌಡ ಹೇಳಿದರು.
ಎಂಸಿ ಹಳ್ಳಿ ಗ್ರಾಪಂ ಕಚೇರಿಯಲ್ಲಿ ಛತ್ತೀಸ್‌ಗಢದ ಬಿಲೈ ನಗರದಲ್ಲಿ ಇತ್ತೀಚೆಗೆ ನಡೆದ 32ನೇ ರಾಷ್ಟ್ರೀಯ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ಸಬ್ ಜೂನಿಯರ್ ತಂಡವನ್ನು ಪ್ರತಿನಿಧಿಸಿ ಗೆಲುವು ಸಾಧಿಸಿದ ಕ್ರೀಡಾಪಟುಗಳನ್ನು ಸನ್ಮಾನಿಸಿ ಮಾತನಾಡಿದರು.
ಕಿರಿಯರ ವಿಭಾಗದ ರಾಷ್ಟ್ರೀಯ ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಎಂ.ಸಿ.ಹಳ್ಳಿ ಗ್ರಾಮದ ಎಂ.ಎನ್.ಲಕ್ಷ್ಮಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಎಸ್.ಸುಮೀಕ್ಷ, ಯು.ಭೂಮಿಕ ಹಾಗೂ ಎಸ್.ಶರತ್ ರಾಜ್ಯ ಕಿರಿಯರ ಥ್ರೋ ಬಾಲ್ ತಂಡವನ್ನು ಪ್ರತಿನಿಧಿಸಿ ಗೆಲುವು ಪಡೆದಿದ್ದಾರೆ. ಕರ್ನಾಟಕ ತಂಡದ ನಾಯಕಿ ಎಸ್.ಸುಮೀಕ್ಷ ತಂಡವನ್ನು ಮುನ್ನಡೆಸಿ ಭರವಸೆ ಮೂಡಿಸಿದ್ದಾರೆ ಎಂದರು.
ಕಳೆದ ಕೆಲ ತಿಂಗಳ ಹಿಂದೆ ಇಂದೂರ್‌ನಲ್ಲಿ ನಡೆದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಉತ್ತಮ ನಿರ್ವಹಣೆ ತೋರಿ ಗಮನ ಸೆಳೆದ ರಾಜ್ಯ ಸಬ್ ಜೂನಿಯರ್ ಥ್ರೋ ಬಾಲ್ ತಂಡದ ನಾಯಕಿ ಎಸ್.ಸಮೀಕ್ಷ ಬಿಲೈ ನಗರದಲ್ಲಿ ನಡೆದ ಎರಡು ಪಂದ್ಯದಲ್ಲಿ ಪಂದ್ಯ ಪುರುರೋಷತ್ತಮ ಪ್ರಶಸ್ತಿ ಸಹ ಪಡೆದು ಗ್ರಾಮದ ಹಿರಿಮೆ ಹೆಚ್ಚಿಸಿದ್ದಾರೆ. ಈ ಮೂವರ ಅಸಾಮಾನ್ಯ ಸಾಧನೆ ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಸ್ಪೂರ್ತಿಯಾಗಿದೆ ಎಂದರು.
ಉಪಾಧ್ಯಕ್ಷೆ ಅಲಮೇಲಮ್ಮ, ಪಿಡಿಒ ಎಲ್.ಆರ್.ಈಶ್ವರಯ್ಯ ಮತ್ತಿತರರಿದ್ದರು.