

ಯಲ್ಲಾಪುರ: ಅಭಿವೃದ್ಧಿಯಲ್ಲಿ ಶೂನ್ಯ, ಭ್ರಷ್ಟಾಚಾರದಲ್ಲಿ ಸಾಧನೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಹೆಗ್ಗಳಿಕೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಟೀಕಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ಭ್ರಷ್ಟಾಚಾರಗಳನ್ನು ಮುಚ್ಚಿ ಹಾಕಲು ಸಿಬಿಐ ಹಾಗೂ ರಾಜಭವನವನ್ನು ನಿಷ್ಕ್ರಿಯಗೊಳಿಸಲು ಹೊರಟಿದೆ. ರಾಜ್ಯದಲ್ಲಿ ಸಚಿವ ಸಂಪುಟದ ಅನುಮತಿ ಇಲ್ಲದೇ ಸಿಬಿಐ ತನಿಖೆ ನಡೆಸಬಾರದೆಂಬ ನಿರ್ಣಯ ಹಾಗೂ ಸಂಪುಟದ ಅನುಮತಿ ಇಲ್ಲದೇ ಮುಖ್ಯ ಕಾರ್ಯದರ್ಶಿ ರಾಜ್ಯಪಾಲರಿಗೆ ಯಾವುದೇ ಮಾಹಿತಿ ನೀಡಬಾರದೆಂಬ ನಿರ್ಧಾರ ಕೈಗೊಂಡಿರುವುದು ಕಾಂಗ್ರೆಸ್ನ ದುಸ್ಥಿತಿಯ ಕೈಗನ್ನಡಿಯಾಗಿದೆ. ಸಿದ್ದರಾಮಯ್ಯರಂತೆ ಬೇರೆ ಬೇರೆ ಹಗರಣಗಳಲ್ಲಿ ಸಿಲುಕಿಕೊಂಡ 9ಕ್ಕೂ ಹೆಚ್ಚು ಸಚಿವರಿಗೆ ರಕ್ಷಣೆ ನೀಡಲು ಕಾಂಗ್ರೆಸ್ ಈ ನಿರ್ಣಯ ಮಾಡಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರ ವಿರುದ್ಧ ಹಿಂದಿನ ಅವಧಿಯಲ್ಲಿ ರಿಡೂ ಆರೋಪ ಬಂದಾಗ ಲೋಕಾಯುಕ್ತವನ್ನು ತೆಗೆದು ಎಸಿಬಿ ವ್ಯವಸ್ಥೆ ಜಾರಿಗೆ ತಂದರು. ಪ್ರಶ್ನಾತೀತ ನಾಯಕರೆಂಬಂತೆ ಆಡಳಿತ ನಡೆಸಿ, ತನ್ನ ಯಾವುದೇ ಹಗರಣಗಳು ಆಚೆ ಬರದಂತೆ ನೋಡಿಕೊಂಡರು. ಎರಡನೇ ಬಾರಿ ಸಿಎಂ ಆದಾಗ ಮತ್ತೊಮ್ಮೆ ಅಂತಹ ನಿರ್ಧಾರ ಕೈಗೊಂಡು ಕರ್ನಾಟಕವನ್ನು ಕುಖ್ಯಾತಿಗೆ ತಳ್ಳುತ್ತಿದ್ದಾರೆ ಎಂದು ಕೋಣೆಮನೆ ದೂರಿದರು.
ಶ್ರೇಷ್ಠ ರಾಜಕೀಯ ನೇತಾರರ ಆಡಳಿತದಿಂದ ಮೌಲ್ಯಾಧಾರಿತ, ಜನಪರ ರಾಜಕಾರಣಕ್ಕೆ ರಾಜ್ಯ ಹೆಸರಾಗಿತ್ತು. ಸಾಂಸ್ಕೃತಿಕ, ರಾಜಕೀಯವಾಗಿ ದೇಶದಲ್ಲೇ ಗಮನ ಸೆಳೆದ ರಾಜ್ಯ ಕರ್ನಾಟಕ. ಆದರೆ, ಕಳೆದ ಒಂದೂವರೆ ವರ್ಷದಲ್ಲಿ ಕಾಂಗ್ರೆಸ್ನ ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತದ ಕಾರಣಕ್ಕೆ ಇಡೀ ದೇಶದಲ್ಲಿ ತಲೆತಗ್ಗಿಸುವಂತಾಗಿದೆ ಎಂದರು.
ಸಿದ್ದರಾಮಯ್ಯ ಅವರ ಮೂಲಕ ಭ್ರಷ್ಟ ಕಾಂಗ್ರೆಸ್ಸಿಗರನ್ನು ರಕ್ಷಿಸುವುದು ಕಾಂಗ್ರೆಸ್ ಹೈಕಮಾಂಡ್ ಯೋಚನೆಯಾಗಿದೆ. ತನ್ನ ವಿರುದ್ಧ ಎಫ್ಐಆರ್ ಆದರೂ ದೆಹಲಿ ಸಿಎಂ ರೀತಿ ಆಡಳಿತ ನಡೆಸುತ್ತೇನೆಂಬ ಮೂರ್ಖತನದ ತೀರ್ಮಾನ ಸಿದ್ದರಾಮಯ್ಯ ಕೈಗೊಂಡಿದ್ದಾರೆ. ನ್ಯಾಯಾಂಗದ ಮೇಲೂ ವಿಶ್ವಾಸವಿಲ್ಲದ ಜಮೀರ್ ಅಹ್ಮದ್ ಅವರಂತಹ ಸಚಿವರು ಕಾಂಗ್ರೆಸ್ನ ಮನಸ್ಥಿತಿಯ ಪ್ರತಿಬಿಂಬವಾಗಿದ್ದಾರೆ. ಇಂತಹ ಸರ್ಕಾರ ಹೆಚ್ಚು ದಿನ ಇರಲು ಸಾಧ್ಯವಿಲ್ಲ, ಸಿದ್ದರಾಮಯ್ಯ ರಾಜೀನಾಮೆ ನೀಡುವುದು ನಿಶ್ಚಿತ ಎಂದರು.
ಜಿಲ್ಲಾ ಪ್ರಮುಖರಾದ ಉಮೇಶ ಭಾಗ್ವತ, ಗಣಪತಿ ಮಾನಿಗದ್ದೆ, ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಮಾಧ್ಯಮ ಸಂಚಾಲಕ ಕೆ.ಟಿ. ಹೆಗಡೆ, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ ಇದ್ದರು.