

ಗೋಕರ್ಣ: ಜಾತಕದಲ್ಲಿ ಸಾಧನೆಗೆ ಅವಕಾಶವಿಲ್ಲದಿದ್ದರೂ ಸಾಧನೆ ಮಾಡುವುದನ್ನು ಯಾವತ್ತೂ ಕೈಬಿಡಬಾರದು. ಸತತ ಸಾಧನೆಗೆ ಜಾತಕವನ್ನೇ ಬದಲಾಯಿಸುವ ಮಹಾಶಕ್ತಿಯಿದೆ ಎಂದು ಅಶೋಕೆಯ ಗುರುದೃಷ್ಟಿ ಭವನದಲ್ಲಿ 31ನೇ ಅನಾವರಣ ಚಾತುರ್ಮಾಸ್ಯದಲ್ಲಿರುವ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಶನಿವಾರ ಶ್ರೀಮಠದ ಶಿಷ್ಯಭಕ್ತರಿಂದ ತುಲಾಭಾರ ಸೇವೆಯನ್ನು ಸ್ವೀಕರಿಸಿ ‘ಕಾಲ’ ಪ್ರವಚನದಲ್ಲಿ ಶ್ರೀಗಳು ಗ್ರಹರಾಶಿಗಳ ಮೂಲಕ ಫಲಾಫಲಗಳ ವಿಶ್ಲೇಷಣೆ ಕೈಗೊಂಡು ಸರ್ವರನ್ನು ಆಶೀರ್ವದಿಸಿದರು.
ಜಾತಕದಲ್ಲಿ ಸಾಧನೆಗೆ ದಾರಿಯೇ ಇಲ್ಲ. ಮತ್ತೆ ನಾವ್ಯಾಕೆ ಸಾಧನೆಗೆ ಪ್ರಯತ್ನಿಸಬೇಕು ಎಂಬ ಭಾವ ಸರ್ವಥಾ ಸಲ್ಲ. ಜಾತಕದಲ್ಲಿ ಸಾಧನೆ ಇಲ್ಲದಿದ್ದರೂ ಸಾಧನೆ ಮಾಡಿ. ಜಾತಕವೇ ಬದಲಾಗುತ್ತದೆ. ಅಂತಹ ಮಹಾಶಕ್ತಿ ಸಾಧನೆಗಿದೆ. ಪ್ರತಿ ವ್ಯಕ್ತಿಗೂ ಜಾತಕದ ಗತಿ ಮಾರ್ಪಡಿಸುವ ಅವಕಾಶವಿದೆ. ಮಾನವರಾದ ನಮಗಿರುವ ಈ ಅವಕಾಶ ಪ್ರಾಣಿ-ಪಕ್ಷಿ ಸಹಿತ ಸೃಷ್ಟಿಯ ಇನ್ನಾವುದೆ ಜೀವಿಗಳಿಗೆ ಲಭ್ಯವಿಲ್ಲ.
ಅದೇ ರೀತಿ ಸತ್ಕರ್ಮಗಳಿಂದ ಸಹ ಜಾತಕದಲ್ಲಿನ ಭವಿಷ್ಯವನ್ನೇ ಬದಲಾಯಿಸಲು ಸಾಧ್ಯವಿದೆ. ಇದಕ್ಕೆ ಸತ್ಕರ್ಮಗಳು ಮತ್ತು ಪುಣ್ಯಕಾರ್ಯಗಳು ಹೆದ್ದಾರಿಗಳಾಗಿದ್ದು ಈ ಪಥದಿಂದ ಮುಕ್ತಿಯನ್ನು ಸಂಪಾದಿಸಿಕೊಳ್ಳಬಹುದಾಗಿದೆ. ಇದಕ್ಕೆ ಜಾತಿ, ಲಿಂಗ,ದೇಶ, ಕಾಲಗಳು ಎಂದೂ ತಡೆಯಾಗಿ ನಿಲ್ಲಲಾರವು. ಈ ಹಿನ್ನೆಲೆಯಲ್ಲಿ ಮನುಷ್ಯರಾಗಿ ಜನಿಸಿದ ಎಲ್ಲರಿಗೂ ಮುಕ್ತಿಯ ಸಾಧನೆಗೆ ಬಾಗಿಲುಗಳು ಸದಾ ತೆರೆದಿವೆ ಎಂದು ವಿವರಿಸಿದ ಶ್ರೀಗಳು ಗ್ರಹಗಳು ಏಕಾದಶ ಸ್ಥಾನದಲ್ಲಿ ಸ್ಥಿತವಾಗಿ ಸರ್ವರಿಗೂ ಉತ್ತಮ ಫಲ ಕೊಡಲಿ ಎಂದು ಹರಸಿದರು.
ಧರ್ಮಸಭೆಯಲ್ಲಿ ಹಿಂದುಸ್ತಾನ್ ಪೆಟ್ರೋಲಿಯಂನ ನಿವೃತ್ತ ಆಡಳಿತ ನಿರ್ದೇಶಕ ವರ್ಮುಡಿ ಕುಮಾರಸ್ವಾಮಿ ಅವರು ಶ್ರೀರಾಮಚಂದ್ರ ಭಾರತೀ ಸ್ವಾಮೀಜಿ ಅವರ ಜೀವನ-ಸಾಧನೆಗಳ ಅನಾವರಣ ನೆರವೇರಿಸಿದರು. ಅನಾವರಣದ ಮಹತ್ವವನ್ನು ವರ್ಣಿಸಿದ ಶ್ರೀಗಳು, ಒಂದಾಗಿ ಇದ್ದುದನ್ನು ಎರಡಾಗಿಸುವ ಕಾರ್ಯ ಸುಲಭ. ಆದರೆ, ಎರಡನ್ನು ಮತ್ತೆ ಒಗ್ಗೂಡಿಸಿ ಒಂದಾಗಿಸುವುದು ಮಹಾಕಷ್ಟದ ಕಾರ್ಯ. ಅಂತಹದ್ದನ್ನು ಸಾಧಿಸಿ ತೋರಿಸಿ ಎರಡು ಮಠಗಳನ್ನು ಏಕೀಕರಿಸಿ ಮಠದ ಇತಿಹಾಸದಲ್ಲಿ ನವವಿಕ್ರಮಕ್ಕೆ ಕಾರಣರಾದವರು ಶ್ರೀರಾಮಚಂದ್ರ ಭಾರತಿ ಸ್ವಾಮೀಜಿ ಅವರು. ಅಂತಹ ಗುರುವರ್ಯರ ಕೃಪಾಕಟಾಕ್ಷ ಮತ್ತು ಗುರುಕೃಪೆ ಶ್ರೀಮಠದ ಸಕಲ ಸದ್ಭಕ್ತರಿಗೆ ಪ್ರಾಪ್ತವಾಗಿ ಸನ್ಮಾರ್ಗಕ್ಕೆ ಪ್ರೇರಣೆಯಾಗಲಿ ಎಂದು ಆಶೀರ್ವಾದವಿತ್ತರು.
ಶಾಸಕ ಶಿವರಾಮ ಹೆಬ್ಬಾರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಶ್ರೀಮಠದ 101 ಶಿಷ್ಯಭಕ್ತರು ತುಲಾಭಾರಸೇವೆಯನ್ನು ಕೈಗೊಂಡರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರ.ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಕೋಶಾಧ್ಯಕ್ಷ ಸುಧಾಕರ ಬಡಗಣಿ, ಸಿದ್ದಾಪುರ ಮಂಡಲಾಧ್ಯಕ್ಷ ಮಹೇಶ ಚಟ್ನಳ್ಳಿ, ಕಾರ್ಯದರ್ಶಿ ಚಂದನ ಶಾಸ್ತ್ರಿ, ಶಾಂತಾರಾಮ ಹೆಗಡೆ, ತುಲಾಭಾರ ಸೇವಾ ಸಮಿತಿಯ ವಿ.ಡಿ.ಹೆಗಡೆ, ರಾಜಾರಾಮ ಭಟ್ಟ ಮೂರೂರು ಇತರರಿದ್ದರು. ಎಸ್.ಜಿ.ಭಟ್ಟ ನಿರ್ವಹಿಸಿದರು.