

ಶಿರಾಳಕೊಪ್ಪ: ನಾವು ಗಳಿಸಿದ ಆಸ್ತಿಯನ್ನು ಯಾರು ಬೇಕಾದರೂ ಕದಿಯಬಹುದು. ಆದರೆ, ಕಲಿತ ವಿದ್ಯೆಯನ್ನು ಯಾರೂ ಕದಿಯಲಾರರು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕ್ರೀಡಾ ಮತ್ತು ಸಾಂಸ್ಕ್ರತಿಕ ವೇದಿಕೆಯ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಜನೆ ವೇಳೆ ಗಮನವಿಟ್ಟು ಕಲಿಯಬೇಕು. ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಇಂದಿನ ಯುವಜನಾಂಗ ಎಲ್ಲವನ್ನೂ ಮರೆಯುತ್ತಿದೆ. ಹೆತ್ತ ತಾಯಿ, ತಂದೆ, ಸ್ನೇಹಿತರು, ಬಂಧುಗಳನ್ನು ಮರೆಯುತ್ತಿದ್ದೇವೆ ಎಂದರು.
ಸಾಧನೆ ಎಂದೆಂದಿಗೂ ಸಾಧಕನ ಸೊತ್ತೇ ಹೊರತು ಸೋಮಾರಿಗಳ ಸೊತ್ತಾಗಲು ಸಾಧ್ಯವೇ ಇಲ್ಲ. ನಾವು ಸಮಯವನ್ನು ಸರಿಯಾಗಿ ಬಳಸಿಕೊಂಡಾಗ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪಟ್ಟಣದ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯ ಇರುವುದರಿಂದ ಮುಂದೆ ಬರುತ್ತಾರೆ ಎಂದು ತಿಳಿದಿದ್ದೇವೆ. ಆದರೆ ಕಳೆದ ಕೆಲವು ವಷರ್ಗಳ ಹಿಂದಿನ ಸಾಧನೆ ನೋಡಿದಾಗ ಐಎಎಸ್, ಐಪಿಎಸ್ ಸೇರಿದಂತೆ ಅನೇಕ ಪರೀಕ್ಷೆಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಾಲೂಕಿನ ಬಡ ವಿದ್ಯಾರ್ಥಿಗಳು ಮುಂದೆ ಬರಲೆಂದು ಶಿಕ್ಷಣಕ್ಕೆ ಒತ್ತು ಕೊಟ್ಟು ಅನೇಕ ಸೌಕರ್ಯಗಳನ್ನು ಒದಗಿಸಿದ್ದಾರೆ. ಅವರ ಎಲ್ಲ ಕಾರ್ಯಗಳಿಗೂ ಸಂಸದ ರಾಘಣ್ಣ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ ಎಂದರು.
ಕೆಎಸ್‌ಡಿಎಲ್ ಮಾಜಿ ನಿರ್ದೇಶಕಿ ನಿವೇದಿತಾ ರಾಜು ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸಕ್ತ ಹಂಚಿದರು. ಪ್ರಾಚಾರ್ಯ ಪ್ರಭಾಕರ ಎಸ್ ಮಂಟೂರೆ, ಮಲೆನಾಡು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಪ್ರಮುಖರಾದ ಶ್ರೀಧರ್ ಬಾಬು, ರಟ್ಟಿಹಳ್ಳಿ ಲೋಕೇಶ್, ಮಂಚಿ ಶಿವಾನಂದ, ಚೆನ್ನವೀರಶೆಟ್ಟಿ ಇತರರಿದ್ದರು.