ಸಾಧನೆ ಹಾದಿಯಲ್ಲಿ ನಡೆಯಿರಿ: ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ

27CBP4
Published on

ಚಿಕ್ಕಬಳ್ಳಾಪುರ: ಭವಿಷ್ಯದ ರೂಪುರೇಷೆಗಳ ಯೋಜನೆಯಲ್ಲಿ ಅಭಿವೃದ್ಧಿ ಹೊಂದುವುದರ ಜತೆಗೆ ಸಮಾಜದ ಏಳಿಗೆಗೂ ಶ್ರಮಿಸಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು. ಎಸ್‌ಜೆಸಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಪದವಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಾಧನೆ ಹಾದಿಯ ಯಾವುದೇ ಸಂದರ್ಭದಲ್ಲಿ ಧೃತಿಗೆಡದೆ ಮುನ್ನಡೆಯಬೇಕು. ಮಕ್ಕಳ ಸುಖದಲ್ಲಿ ಪಾಲಕರು ಕಷ್ಟ ಮರೆಯುತ್ತಾರೆ. ಇದರ ಅರಿವು ಎಲ್ಲ ವಿದ್ಯಾರ್ಥಿಗಳಲ್ಲಿರಬೇಕು. ಮನರಂಜನೆಯಲ್ಲಿ ಕಾಲಹರಣ ಮಾಡಿ, ತಂದೆ-ತಾಯಿಯ ಹಾಗೂ ಗುರುಗಳ ಪರಿಶ್ರಮ ವ್ಯರ್ಥ ಮಾಡಬಾರದು. ಜವಾಬ್ದಾರಿಯುತ ಜೀವನ ನಡೆಸಬೇಕು ಎಂದರು.


ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಳ್ಳಲು ಶಿಸ್ತು, ಶ್ರದ್ಧೆ ಮತ್ತು ಮಾನವೀಯ ಮೌಲ್ಯ ಹೊಂದಿರಬೇಕು. ಗೌತಮ ಬುದ್ಧನ ಮಾದರಿಯಲ್ಲಿ ಮೌನದ ಕೆಲಸದಿಂದಲೇ ಎಲ್ಲರನ್ನು ಗೆಲ್ಲಬೇಕು. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಪಕವಾಗಿ ಸ್ವೀಕರಿಸಬೇಕು. ಅಡ್ಡಿ, ಆಕ್ಷೇಪಣೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಆದರೆ, ಬೆಳೆದು ಬಂದ ದಾರಿಯನ್ನು ಮರೆಯಬಾರದು. ಬಡತನದ ನಡುವೆಯೂ ವಿಶಿಷ್ಟ ವ್ಯಕ್ತಿತ್ವ, ಪರಿಶ್ರಮದಿಂದ ಅಬ್ರಹಾಂ ಲಿಂಕನ್ ಜಗತ್ತಿನ ಪ್ರಬಲ ರಾಷ್ಟ್ರ ಅಮೆರಿಕದ ಅಧ್ಯಕ್ಷರಾದರು ಎಂದರು.


ಘಟಿಕೋತ್ಸವದಲ್ಲಿನ ಪದವೀಧರ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇದನ್ನು ಇತರರು ಮಾದರಿಯಾಗಿ ಸ್ವೀಕರಿಸಬೇಕು ಎಂದರು.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್‌ನ ಹಿರಿಯ ವಿಜ್ಞಾನಿ ಎಂ.ಕೆ.ಸೂರಪ್ಪ ಮಾತನಾಡಿ, ಸಮಾಜದ ಉನ್ನತಿಗೆ ಶೈಕ್ಷಣಿಕ ಬುನಾದಿಯನ್ನು ಬಲಪಡಿಸುವಲ್ಲಿ ಮಠದ ಯೋಜನೆಗಳು ಶ್ಲಾಘನೀಯ ಎಂದರು. ವಿದ್ಯಾರ್ಥಿಗಳು ಓದಿನ ಜತೆಗೆ ವಿಶೇಷ ಕೌಶಲ ಮತ್ತು ಸೂಕ್ತ ನಿರ್ವಹಣೆ, ಪೈಪೋಟಿಗೆ ಅನುಗುಣವಾಗಿ ಹೊಂದಾಣಿಕೆಯ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು. ಸೂಕ್ಷ್ಮಾಣು ಜೀವಿ ಬಳಸಿ ಆಧುನಿಕ ತಂತ್ರಜ್ಞಾನ ಬೆಳವಣಿಗೆಯ ಹೆಸರಿನಲ್ಲಿ ಕೃಷಿ ಕ್ಷೇತ್ರದಲ್ಲಿ ಅಧಿಕ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸಲಾಗುತ್ತಿದೆ. ಇದರಿಂದ ಜಮೀನಿನ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಇದರಿಂದ ಉತ್ಪನ್ನಗಳ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರವಾಗಿ ವೈಜ್ಞಾನಿಕ ಪದ್ಧತಿಯಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಬಳಸಿ ಮಣ್ಣಿನ ಫಲವತ್ತತೆ ವೃದ್ಧಿಗೆ ಗಮನಹರಿಸಬೇಕಾಗಿದೆ ಎಂ ದರು.

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ಸಮಾಜದ ಸಕಾರಾತ್ಮಕ ಬದಲಾವಣೆಯು ಶಿಕ್ಷಣದಿಂದಲೇ ಸಾಧ್ಯ ಎಂಬುದನ್ನು ಮನಗಂಡು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಇದೇ ರೀತಿಯಲ್ಲಿ ನಿರ್ಮಲಾನಂದನಾಥ ಶ್ರೀಗಳು ಆದಿಚುಂಚನಗಿರಿ ಗ್ರಾಮೀಣ ಮಕ್ಕಳ ಶಿಕ್ಷಣ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ 15 ಶಾಲೆಗಳ 900 ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ಶ್ರೀ ಮಂಗಳನಾಥ ಸ್ವಾಮೀಜಿ, ಎಸ್‌ಜೆಸಿಐಟಿ ಆಡಳಿತ ಮಂಡಳಿ ಸದಸ್ಯರಾದ ಡಾ.ಕೆ.ಪಿ.ಶ್ರೀನಿವಾಸಮೂರ್ತಿ, ಪಿ.ಆರ್.ಶ್ರೀನಿವಾಸ್, ಪ್ರಾಂಶುಪಾಲ ಜಿ.ಟಿರಾಜು, ರಿಜಿಸ್ಟ್ರಾರ್ ಜೆ.ಸುರೇಶ ಮತ್ತಿತರರು ಇದ್ದರು.

ಪ್ರತಿಭಾವಂತರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಪದವೀಧರ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೈಮಾನಿಕ ವಿಭಾಗ 61, ಕಾಮಗಾರಿ 126, ಯಾಂತ್ರಿಕ 117, ವಿದ್ಯುನ್ಮಾನ 196, ದೂರಸಂಪರ್ಕ 8, ಗಣಕಯಂತ್ರ 141, ಮಾಹಿತಿ ತಂತ್ರಜ್ಞಾನ 120 ಮತ್ತು ಎಂ.ಟೆಕ್ 21, ಎಂಬಿಎ ವಿಭಾಗದ 55 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net