

ಮೈಸೂರು: ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಗರದಲ್ಲಿ ನಡೆಯಿತು.
ಎಂ-ನರೇಗಾ ಯೋಜನೆಯಡಿ ಕಡಿಮೆ ಮಾನವ ದಿನಗಳನ್ನು ಸಾಧಿಸಿರುವ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಮಾನವ ದಿನಗಳನ್ನು ಸಾಧಿಸಲು ಜಿಪಂ ಸಿಇಒ ಸೂಚಿಸಿದರು.
ಈ ಯೋಜನೆಯ ಕಾಮಗಾರಿಗಳ ಪ್ರಗತಿ, ಶಿಶುಪಾಲನಾ ಕೇಂದ್ರ ಪ್ರಗತಿ, ಸಾಮಾಜಿಕ ಪರಿಶೋಧನೆ ಪ್ರಗತಿ, ಸ್ವಸಹಾಯ ಸಂಘಗಳ ವರ್ಕ್‌ಶೆಡ್, ಮಹಿಳಾ ಭಾಗವಹಿಸುವಿಕೆ ಹಾಗೂ ಸ್ವಚ್ಛ ಭಾರತ್ ಅಭಿಯಾನ, ವೈಯಕ್ತಿಕ ಶೌಚಗೃಹ, ಸಮುದಾಯ ಶೌಚಗೃಹ, ಘನತ್ಯಾಜ್ಯ ವಿಲೇವಾರಿ ಘಟಕಗಳ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಮತ್ತು ಕಸ ಸಂಗ್ರಹಣೆ ಪ್ರಾರಂಭಿಸಿರುವ ಕುರಿತು ಚರ್ಚಿಸಿದರು.
ಜಲಜೀವನ್ ಮಿಷನ್, ಕುಡಿಯುವ ನೀರು ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ, ತುರ್ತು ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸೇರಿದಂತೆ ಇತರ ವಿಷಯಗಳ ಕುರಿತು ಪ್ರಗತಿ ಪರಿಶೀಲಿಸಲಾಯಿತು.
ತೆರಿಗೆ ಪರಿಷ್ಕರಣೆ, ತೆರಿಗೆ ವಸೂಲಾತಿ, ಡಿಜಿಟಲ್ ಗ್ರಂಥಾಲಯ, ಪಂಚತಂತ್ರ ಡಿಸಿಬಿ ಪ್ರಗತಿ, ಸಕಾಲ ಯೋಜನೆ, ಸರ್ಕಾರಿ ಸಿಬ್ಬಂದಿ, ಗ್ರಾಪಂ ಇ-ಹಾಜರಾತಿ ಪ್ರಗತಿ, ಆಸ್ತಿ ಸಮೀಕ್ಷೆ ಹಾಗೂ 14 ಮತ್ತು 15ನೇ ಹಣಕಾಸಿನ ಪ್ರಗತಿ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ(ಆಡಳಿತ) ಸವಿತಾ, ಉಪಕಾರ್ಯದರ್ಶಿ(ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು, ಮುಖ್ಯ ಯೋಜನಾಧಿಕಾರಿ ರಾಜ್‌ಗೋಪಾಲ್, ಮುಖ್ಯ ಲೆಕ್ಕಾಧಿಕಾರಿ ಸಿದ್ದಗಂಗಮ್ಮ, ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಅನುಷ್ಠಾನ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.