ಕೆವೈಟಿಸಿಯಿಂದ ಅಚ್ಚಮ್ಮ ಬಾವಿ ಸ್ವಚ್ಛತೆ

ಕನಕಗಿರಿಯ ಅಚ್ಚಮ್ಮನ ಬಾವಿ ಸ್ವಚ್ಛವಾಗಿರುವುದು.
ಕನಕಗಿರಿಯ ಅಚ್ಚಮ್ಮನ ಬಾವಿ ಸ್ವಚ್ಛವಾಗಿರುವುದು.
Published on

ಕನಕಗಿರಿ: ಕೇರಳದ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸಂಪತ್ತು ಸಿಕ್ಕಾಗ ಬೆಳಕಿಗೆ ಬಂದಿದ್ದ ಇಲ್ಲಿನ ಅಚ್ಚಮ್ಮನ ಬಾವಿಯನ್ನು ಇತ್ತೀಚೆಗಷ್ಟೇ ಪುರಾತತ್ವ ಇಲಾಖೆ ಸ್ವಾಧೀನಪಡಿಸಿಕೊಂಡು ರಕ್ಷಿಸಲು ಮುಂದಾಗಿತ್ತು. ಈಗ ಗಂಗಾವತಿಯ ಕಿಷ್ಕಿಂಧಾ ಯುವ ಚಾರಣ ಬಳಗ (ಕೆವೈಟಿಸಿ)ದಿಂದ ಭಾನುವಾರ ಬಾವಿಯನ್ನು ಸ್ವಚ್ಛಗೊಳಿಸಲಾಯಿತು.

ಕನಕಗಿರಿಯನ್ನು ಆಳಿದ ಇಮ್ಮಡಿ ಉಡುಚಪ್ಪ ನಾಯಕನ, ರಾಣಿ ಅಚ್ಚಮ್ಮ ನಿರ್ಮಿಸಿದ್ದ ಕಲಾತ್ಮಕ ಬಾವಿ ಸಂರಕ್ಷಣೆಯಿಲ್ಲದೇ ಅವಸನದತ್ತ ಸಾಗಿತ್ತು. ಇತಿಹಾಸಕಾರರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈ ಬಾವಿಗೆ ಇಳಿಯುವಾಗ ಎಡ ಹಾಗೂ ಬಲ ಭಾಗದಲ್ಲಿ ಎರಡು ದೇವಸ್ಥಾನಗಳಿವೆ. ಬಲ ಭಾಗದಲ್ಲಿ ಅನಂತ ಪದ್ಮನಾಭ ದೇವಸ್ಥಾನವಿದ್ದು, ಇದು ಕೇರಳದ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸಂಪತ್ತು ಸಿಕ್ಕಾಗ ಹೆಚ್ಚಾಗಿ ಬೆಳಕಿಗೆ ಬಂದಿತ್ತು. ಆಗ ನಿಧಿಗಳ್ಳರ ಭಯವೂ ಇತ್ತು. ಆದರೆ, ಈ ಬಾವಿ ಸುತ್ತಲೂ ಮುಳ್ಳುಕಂಟಿ ಬೆಳೆದು ಇಳಿಯುವುದಕ್ಕೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಡಾ.ಶೇಜೇಶ್ವರ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು.

ಈ ನಡುವೆಯೇ ಕೆವೈಟಿಸಿ ಬಳಗದ ಹರನಾಯಕ, ಸುರೇಶ್ ಸಮಗಂಡಿ, ಪ್ರಕಾಶ್ ಮರನಾಳ, ಅರ್ಜುನ್, ಮಂಜುನಾಥ್ ಇಂಡಿ, ಚನ್ನಪ್ಪ ಬಳ್ಳೊಳ್ಳಿ, ದೇವರಾಜ್, ಮುತ್ತು, ಮಧು, ಮಂಜುಳಾ ಶೆಟ್ಟಿ, ಬಸವರಾಜ್, ಹನುಮೇಶ್ ನಾಯಕ ತೋಳದ್, ಶ್ರೀಧರ್, ಪಂಪಾಪತಿ ಮುದ್ಗಲ್, ಸಿದ್ದು, ಮಂಜುನಾಥ್, ಸಂಜಯ್, ಸಂತೋಷ್ ಕುಂಬಾರ್, ಕಲ್ಯಾಣ್, ವೀರೇಶ್, ಆಕಾಶ್ ನಾಗಲಿಕರ್ ಅವರು ಭಾನುವಾರ ರಾಣಿ ಅಚ್ಚಮ್ಮನ ಬಾವಿ ಸ್ವಚ್ಛಗೊಳಿಸಿ ಜಮೀನಿನ ರೈತರ ಬೋರ್‌ವೆಲ್ ನೀರಿನಿಂದ ತೊಳೆದು ಪೂಜೆ ಸಲ್ಲಿಸಿದ್ದಾರೆ. ಬಾವಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಬಾವಿಯ ಇತಿಹಾಸ: ರಾಣಿ ಅಚ್ಚಮ್ಮ ಕೃಷಿ ನೀರಾವರಿಗಾಗಿ (ಕ್ರಿ.ಶ.1618-1708)ರಲ್ಲಿ ಈ ಬಾವಿಯನ್ನು ನಿರ್ಮಿಸಿದ್ದರು. ಹೀಗಾಗಿಯೇ ಇದಕ್ಕೆ ಅಚ್ಚಮ್ಮನ ಬಾವಿಯೆಂದೇ ಹೆಸರು ವಾಸಿಯಾಗಿದೆ. ಈ ಬಾವಿಯೊಳಗೆ ರಾಣಿ ಅಚ್ಚಮ್ಮ ಮಜ್ಜಿಗೆ ಕಡಿಯುವ ಉಬ್ಬು ಶಿಲ್ಪ ಕಾಣಬಹುದು. ಈ ಶಿಲ್ಪಕ್ಕೆ ಪೂಜೆ ಸಲ್ಲಿಸಲಾಗುತ್ತದೆ. 10.2 ಮೀ. ಉದ್ದ 009.6 ಅಗಲವಾಗಿದೆ. ಮೆಟ್ಟಿಲುಗಳ ಎರಡು ಬದಿಯ ಗೋಡೆಗಳಲ್ಲಿ ಶಿವಲಿಂಗ ಹಾಗೂ ಅನಂತಶಯನ ದೇವಾಲಯಗಳಿದ್ದು, ಪಾಳು ಬಿದ್ದಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net