ಆರೋಪಿ ಮನೆಗೆ ರಕ್ಷಣೆ ದುರ್ದೈವ: ಬಿ.ವೈ.ರಾಘವೇಂದ್ರ ಕಿಡಿ

mp raghavedra speak in seenappa shetty circle
ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಶಿವಮೊಗ್ಗದ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. ಎಂ.ಬಿ.ಭಾನುಪ್ರಕಾಶ್, ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಟಿ.ಡಿ.ಮೇಘರಾಜ್, ಗಿರೀಶ್ ಪಟೇಲ್ ಇದ್ದರು.
Published on

ಶಿವಮೊಗ್ಗ: ನೇಹಾ ಹತ್ಯೆಯಿಂದ ಇಡೀ ಹೆಣ್ಣು ಸಂಕುಲ ಧೃತಿಗೆಡುವಂತಾಗಿದೆ. ಅಮಾನುಷವಾಗಿ ಇರಿದು ಹತ್ಯೆ ಮಾಡಿದ ಆರೋಪಿ ಮನೆಗೆ ರಕ್ಷಣೆ ಕೊಡುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡಿರುವುದು ದುರ್ದೈವ. ಈ ಮೂಲಕ ಆರೋಪಿಯನ್ನು ರಕ್ಷಿಸುವ ಕಾರ್ಯವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ನಗರದ ಟಿ.ಸೀನಪ್ಪಶೆಟ್ಟಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಹಲವೆಡೆ ಬಹುಸಂಖ್ಯಾತ ಹಿಂದುಗಳ ಮೇಲೆ ಕ್ಷುಲ್ಲಕ ಕಾರಣದಿಂದ ಹಲ್ಲೆ ನಡೆಸಲಾಗುತ್ತಿದೆ. ಹಲ್ಲೆಗೆ ಒಳಗಾದವರು ಅದನ್ನು ಬಹಿರಂಗ ಪಡಿಸಲು ಬಿಡದೆ ಸರ್ಕಾರವೇ ಧಮ್ಕಿ ಹಾಕುವ ಕೆಲಸ ಮಾಡುತ್ತಿದೆ. ಈಗ ಪಡೆದಿರುವ ಅಧಿಕಾರ ಶಾಶ್ವತವಲ್ಲ. ನಿಮ್ಮ ಸ್ಥಾನ ಯಾವುದು ಎಂಬುದನ್ನು ಕರ್ನಾಟಕ ಮತದಾರರು ಇನ್ನು 15 ದಿನಗಳಲ್ಲಿ ತೋರಿಸಲಿದ್ದಾರೆ. ನಿಮ್ಮ ಚೊಂಬನ್ನು ನಿಮಗೇ ಕೊಟ್ಟು ಮನೆಗೆ ಕಳಿಸಲಿದ್ದಾರೆ ಎಂದು ಹರಿಹಾಯ್ದರು.
ಮುಸ್ಲಿಂ ಮಹಿಳೆಯರ ರಕ್ಷಣೆಗಾಗಿಯೇ ತ್ರಿವಳಿ ತಲಾಖ್ ವಿರುದ್ಧ ಕಾನೂನನ್ನು ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿದೆ. ಇದರ ಬಗ್ಗೆ ಕಾಂಗ್ರೆಸ್ ನಾಯಕರು ಯಾರೂ ಮಾತನಾಡುತ್ತಿಲ್ಲ ಎಂದು ದೂರಿದರು.
ಕಾಂಗ್ರೆಸ್ ತನ್ನ ಆಡಳಿತ ಅವಧಿಯಲ್ಲಿ ಮುಸ್ಲಿಮರ ಓಲೈಕೆ ನೀತಿ ಅನುಸರಿಸುತ್ತಿದ್ದು, ಸಮಾಜಘಾತಕರು ಭಯವಿಲ್ಲದೇ ಹೀನ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಬಹುಸಂಖ್ಯಾತರಿಗೆ ರಕ್ಷಣೆ ಇಲ್ಲವಾಗಿದೆ. ಸಾವಿರಾರು ಘಟನೆಗಳು ನಡೆಯುತ್ತಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರದ ಇಬ್ಬಗೆ ನೀತಿಯಿಂದ ಅಪರಾಧಿಗಳು ಕಾನೂನಿನ ಭಯವಿಲ್ಲದೇ ಓಡಾಡುತ್ತಿದ್ದಾರೆ. ನೇಹಾ ಕುಟುಂಬಕ್ಕೆ ನ್ಯಾಯ ದೊರಕಿಸುವ ಕೆಲಸ ಮಾಡಬೇಕಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯತ್ರಿಗೌಡ ಮಲ್ಲಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ಗಿರೀಶ್ ಪಟೇಲ್, ರಾಜು ತಲ್ಲೂರು, ಎನ್.ಜಿ.ನಾಗರಾಜ್, ಸುರೇಖಾ ಮುರಳೀಧರ್, ಶಾಂತಾ ಸುರೇಂದ್ರ, ಜ್ಯೋತಿ, ರಶ್ಮಿ ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net