

ಉಡುಪಿ: ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಡಿ ವಶಕ್ಕೆ ಪಡೆದುಕೊಂಡಿದ್ದ ವ್ಯಕ್ತಿ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲೇ (Police Station) ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಕೇರಳ ಮೂಲದ ಬಿಜು ಮೋಹನ್ ಎಂದು ಗುರುತಿಸಲಾಗಿದ್ದು, ಇವರು ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಮೃತ ಬಿಜು ಮೋಹನ್ (Biju Mohan) ಮೂರು ದಿನದ ಹಿಂದಷ್ಟೇ ಹಂಗಾರಕಟ್ಟೆ ಮೀನು ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಮೀನಿನ ಫ್ಯಾಕ್ಟರಿ ಸಮೀಪ ವಾಸವಿದ್ದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದರು ಎಂಬ ಆರೋಪದ ಮೇಲೆ ಪೊಲೀಸರು ಅವರನ್ನು ಬಂಧಿಸಿ ಠಾಣೆಯಲ್ಲಿ ಇರಿಸಿದ್ದರು.
ಮುಂಜಾನೆ ಕುಸಿದು ಬಿದ್ದ ಸ್ಥಿತಿಯಲ್ಲಿ ಬಿಜು ಮೋಹನ್ರನ್ನು ಪೊಲೀಸರು ಕಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆ ವೇಳೆಗಾಗಲೇ ಬಿಜು ಮೋಹನ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಲಾಕಪ್ ಡೆತ್ ಪ್ರಕರಣ ಪೊಲೀಸರಿಗೆ ತಲೆನೋವು ತಂದಿದ್ದು, ಸಾವಿನ ಸುತ್ತ ಅನುಮಾನದ ಹುತ್ತವೇ ನಿರ್ಮಾಣವಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ (Police Commissioner) ಅನುಪಮ್ ಅಗರ್ವಾಲ್, ಮಹಿಳೆಯೊಬ್ಬರು ಕಿರುಕುಳ ನೀಡಿದ ಆರೋಪದಡಿ ದೂರು ದಾಖಲಿಸಿದ್ದರು. ಈ ಸಂಬಂಧ ವ್ಯಕ್ತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಲಾಕಪ್ನಲ್ಲಿ ಇರಿಸಲಾಗಿತ್ತು. ಬೆಳಗಿನ ಜಾವ 3:45ರ ಸುಮಾರಿಗೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಆರೋಪಿ ಕುಸಿದು ಬಿದ್ದಿರುವುದನನ್ಉ ಗಮನಿಸಿ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಿಜು ಮೋಹನ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆ ಮತ್ತು ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಎಸ್ಪಿ ಡಾ. ಅರುಣ್ ಕುಮಾರ್ ಭೇಡಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ಪ್ರಕರಣ ಆಗಿರುವುದರಿಂದ ತನಿಖೆ ಸಿಐಡಿಗೆ (CID) ವರ್ಗಾವಣೆ ಆಗಲಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.