

ಮಂಗಳೂರು: ನಗರ ಹೊರವಲಯದ ವಳಚ್ಚಿಲ್‌ನಲ್ಲಿ ಆ.19ರಂದು ಶುಕ್ರವಾರ ರಾತ್ರಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಮಿಸ್ಟ ಯಾನೇ ಮೊಹಮ್ಮದ್ ಮುಸ್ತಾಕ್ (26)ನನ್ನು ಸೋಮವಾರ ಸ್ಥಳ ಮಹಜರಿಗೆ ಘಟನೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗುವಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೃತ್ಯದ ವೇಳೆ ಬಳಕೆ ಮಾಡಲಾದ ವಾಹನ, ಆಯುಧ ಮೊದಲಾದವುಗಳನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಪೊಲೀಸರು ಆತನನ್ನು ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಂಬಳ ಗ್ರಾಮದ ಬಳಿ ಆತ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಗುಂಡು ತಾಗಿ ಗಾಯಗೊಂಡಿರುವ ಆರೋಪಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗ್ರಾಮಾಂತರ ಠಾಣೆ ಪಿಎಸ್‌ಐ ವಿನಾಯಕ ಭಾವಿಕಟ್ಟಿ ಮತ್ತು ಸಿಬ್ಬಂದಿ ಸದ್ದಾಂ ಹುಸೇನ್ ಕೂಡಾ ಗಾಯಗೊಂಡಿದ್ದಾರೆ.