

ಆನೇಕಲ್: ರೌಡಿಶೀಟರ್ ಮನೋಜ್ ಎಂಬಾತನ ಮೇಲೆ ಇತ್ತೀಚೆಗೆ ನಡೆದಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಜಿಗಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಸ್ತಮಾನಹಳ್ಳಿಯ ಲೋಕೇಶ್ ಅಲಿಯಾಸ್ ಲೋಕಿ ಬಂಧಿತ. ಪೊಲೀಸರ ಗುಂಡೆೇಟು ತಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅತ್ತಿಬೆಲೆ ಠಾಣೆ ವ್ಯಾಪ್ತಿಯ ಮಾಯಸಂದ್ರದ ಸಮೀಪ ನಿರ್ಮಾಣ ಹಂತದ ರಾಷ್ಟ್ರೀಯ ಹೆದ್ದಾರಿ ಬಳಿ ಆರೋಪಿ ಇರುವ ಮಾಹಿತಿ ಕಲೆ ಹಾಕಿದ ಜಿಗಣಿ ಠಾಣೆಯ ಇನ್‌ಸ್ಪೆಕ್ಟರ್ ಹಾಗೂ ಬನ್ನೇರುಘಟ್ಟ ಠಾಣೆ ಸಬ್‌ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಬಂಧನಕ್ಕೆ ಬಲೆ ಬೀಸಿದ್ದರು. ಪೊಲೀಸರನ್ನು ಕಂಡ ಕೂಡಲೇ ಲೋಕೇಶ್ ಹಲ್ಲೆಗೆ ಮುಂದಾಗಿದ್ದ ಎನ್ನಲಾಗಿದ್ದು, ಈ ವೇಳೆ ಪೇದೆ ಚನ್ನಬಸವ ಕೈಗೆ ಗಾಯವಾಗಿದೆ, ಆತ್ಮರಕ್ಷಣೆಗಾಗಿ ಜಿಗಣಿ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ್ ಲೋಕೇಶ್ ಕಾಲಿಗೆ ಗುಂಡು ಹಾರಿಸಿದ್ದು, ಆತ ಕುಸಿದು ಬಿದ್ದ ತಕ್ಷಣ ವಶಕ್ಕೆ ಪಡೆಯಲಾಗಿದೆ.
ಕೊಲೆ ಯತ್ನ: ನ.18ರಂದು ರೌಡಿಶೀಟರ್ ಮನೋಜ್ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಹಿಂಬಂದಿಯಿಂದ ಮತ್ತೊಂದು ಕಾರಿನಿಂದ ಗುದ್ದಿದ ವಿರೋಧಿ ಗ್ಯಾಂಗ್ ಕೊಲೆ ಪ್ರಯತ್ನ ನಡೆಸಿತ್ತು. ಆದರೆ, ಮನೋಜ್ ಕಾರಿನಿಂದ ಇಳಿದು ತಪ್ಪಿಸಿಕೊಂಡಿದ್ದ. ಪ್ರಕರಣ ಸಂಬಂಧ ಎಸ್‌ಪಿ ಸಿ.ಕೆ.ಬಾಬಾ ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಾಚರಣೆ ರೂಪಿಸಿದ್ದರು. ಗ್ರಾಮಾಂತರ ಅಡಿಷನಲ್ ಎಸ್‌ಪಿ ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.