

ಶಿವಮೊಗ್ಗ: ಗಾಂಧಿಬಜಾರ್‌ನಲ್ಲಿ ನಕಲಿ ಬಂಗಾರವಿಟ್ಟು ಅಸಲಿ ಬಂಗಾರ ಕಳವು ಮಾಡಿದ್ದ ಆರೋಪಿಯನ್ನು ದೊಡ್ಡಪೇಟೆ ಠಾಣೆ ಪೊಲೀಸರು ವರ್ಷದ ಬಳಿಕ ಬಂಧಿಸಿದ್ದಾರೆ. ಮತ್ತೊಬ್ಬಳು ತಲೆಮರೆಸಿಕೊಂಡಿದ್ದಾಳೆ.
ಕೊಪ್ಪಳದ ಮೆಹಬೂಬು (25) ಬಂಧಿತ ಆರೋಪಿ. ಕಳೆದ ವರ್ಷ ಗಾಂಧಿಬಜಾರ್‌ನ ಬಸವೇಶ್ವರ ಟೆಂಪಲ್ ಬಳಿಯಿರುವ ಜ್ಯೂವೆಲ್ಲರಿ ಅಂಗಡಿಗೆ ಬುರ್ಖಾ ಧರಿಸಿದ್ದ ಮಹಿಳೆ ಮತ್ತು ಪುರುಷ ಗ್ರಾಹಕರಂತೆ ಬಂದು ಮೊದಲಿಗೆ 11,500 ರೂ. ಮೌಲ್ಯದ ಚಿನ್ನಾಭರಣ ಖರೀದಿಸಿ ಹೋಗಿದ್ದರು. ಮತ್ತೊಮ್ಮೆ ಬಂದ ಇಬ್ಬರೂ ಬೇರೆ ಒಡವೆಗಳನ್ನು ಖರೀದಿಸುವ ನೆಪದಲ್ಲಿ ಅಂಗಡಿ ವ್ಯಾಪಾರಕ್ಕಿದ್ದ ಹುಡುಗನ ಗಮನ ಬೇರೆಡೆ ಸೆಳೆದು ನಕಲಿ ಬಂಗಾರವಿಟ್ಟು 85,900 ರೂ. ಮೌಲ್ಯದ 17 ಗ್ರಾಂ ಅಸಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.
ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸರು ಕೊಪ್ಪಳದಲ್ಲಿ ಹಸುವಿನ ವ್ಯಾಪಾರ ಮಾಡಿಕೊಂಡಿದ್ದ ಮೆಹಬೂಬು ಎಂಬಾತನನ್ನು ಬಂಧಿಸಿದ್ದಾರೆ. ದೊಡ್ಡಪೇಟೆ ಠಾಣೆ ಇನ್‌ಸ್ಪೆಕ್ಟರ್ ಅಂಜನ್‌ಕುಮಾರ್, ಪಿಎಸ್‌ಐಗಳಾದ ವಸಂತ್, ಶ್ರೀನಿವಾಸ್, ಎಎಸ್‌ಐ ಚಂದ್ರಶೇಖರ್, ಸಿಬ್ಬಂದಿಗಳಾದ ಪಾಲಾಕ್ಷ ನಾಯಕ, ಲಚ್ಚಾನಾಯ್ಕ, ಚಂದ್ರ ನಾಯ್ಕ್, ರಮೇಶ್, ನಿತಿನ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ. ಈ ಪ್ರಕರಣದ ಮತ್ತೋರ್ವ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.