ಕಳಪೆ ಕಾಮಗಾರಿ ಆರೋಪ; ಆಯನೂರು ಗ್ರಾಪಂ ಅಧ್ಯಕ್ಷೆ, ವೈದ್ಯಾಧಿಕಾರಿ ದಿಢೀರ್ ಭೇಟಿ, ಪರಿಶೀಲನೆ

28 anr 1
ಆಯನೂರು ಸಮುದಾಯ ಆರೋಗ್ಯ ಕೇಂದ್ರದ ವಸತಿಗೃಹಗಳ ಕಟ್ಟಡ ಕಾಮಗಾರಿಯನ್ನು ಗ್ರಾಪಂ ಅಧ್ಯಕ್ಷೆ ಪದ್ಮಿನಿ, ವೈದ್ಯಾಧಿಕಾರಿ ಶಿಲ್ಪಾ ವೀಕ್ಷಿಸಿದರು. ಶಿವಕುಮಾರ್, ಗಂಗಾನಾಯ್ಕ, ಸುರೇಶ್, ಸೈಯದ್ ಅಹಮದ್, ನಿಂಗಪ್ಪ ಇತರರಿದ್ದರು.
Published on

ಆಯನೂರು: ಸ್ಥಳೀಯರಿಂದ ಕಳಪೆ ಕಾಮಗಾರಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆಯನೂರು ಗ್ರಾಪಂ ಅಧ್ಯಕ್ಷೆ ಪದ್ಮಿನಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಿಲ್ಪಾ ಅವರು ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆರೋಗ್ಯ ಕೇಂದ್ರದ ವಸತಿ ಗೃಹಗಳ ಕಾಮಗಾರಿಯನ್ನು ಸೋಮವಾರ ಪರಿಶೀಲನೆ ನಡೆಸಿದರು.

ಸ್ಥಳದಲ್ಲಿದ್ದ ಗ್ರಾಮಸ್ಥರು ಸೂಕ್ತ ರೀತಿಯಲ್ಲಿ ಸಿಮೆಂಟ್ ಬಳಸದೆ ಕಾಟಾಚಾರಕ್ಕೆ ಹಳೆಯ ಕಲ್ಲುಗಳನ್ನು ಬಳಸಿ ಅಡಿಪಾಯ ಹಾಕಲಾಗುತ್ತಿದೆ ಎಂದು ಅಧ್ಯಕ್ಷರ ಗಮನಕ್ಕೆ ತಂದರು. ಯಾವ ಅನುದಾನದಲ್ಲಿ ಆಗಿರುವ ಕಾಮಗಾರಿ, ಎಷ್ಟು ಮೊತ್ತದ ಕಾಮಗಾರಿ ಹಾಗೂ ಕಾಮಗಾರಿಯ ಎಸ್ಟಿಮೇಟ್ ಕುರಿತು ಗುತ್ತಿಗೆದಾರನ ಬಳಿ ಅಧ್ಯಕ್ಷರು ವಿವರ ಕೇಳಿದರು. ಇದು ಸಾರ್ವಜನಿಕರ ಆಸ್ತಿಯಾಗಿದ್ದು ಒಳ್ಳೆಯ ಕೆಲಸ ಮಾಡಿ. ಪದೇಪದೆ ಮಾಡುವುದಲ್ಲ. ಮೇಲ್ನೋಟಕ್ಕೆ ಕಾಮಗಾರಿ ಕಳಪೆಯಾಗಿರುವುದು ಕಂಡು ಬರುತ್ತಿದೆ. ಸಂಬಂಧಿಸಿದ ಇಂಜಿನಿಯರ್ ಬಂದು ಪರಿಶೀಲನೆ ನಡೆಸಿ, ವರದಿ ನೀಡಿದ ಮೇಲೆ ಕಾಮಗಾರಿ ಮುಂದುವರಿಸಿ ಎಂದು ಗುತ್ತಿಗೆದಾರರಿಗೆ ಪದ್ಮಿನಿ ಸೂಚಿಸಿದರು.
ಆರೋಗ್ಯ ಕೇಂದ್ರದ ಸೂಪರಿಂಟೆಂಡೆಂಟ್ ಶಿವಕುಮಾರ್, ಗ್ರಾಪಂ ಸದಸ್ಯ ಗಂಗಾನಾಯ್ಕ, ಗುತ್ತಿಗೆದಾರ ನಾಗರಾಜ್, ಗ್ರಾಮಸ್ಥರಾದ ಬಿ.ಎಂ.ಸುರೇಶ್, ಸೈಯದ್ ಅಹಮದ್, ನಿಂಗಪ್ಪ ಇತರರಿದ್ದರು.
ಆಯನೂರಿನ ಸಮುದಾಯ ಆರೋಗ್ಯ ಕೇಂದ್ರದ 2 ವೈದ್ಯಾಧಿಕಾರಿಗಳ ವಸತಿ ಗೃಹ, ನರ್ಸ್‌ಗಳ 2 ವಸತಿಗೃಹ ಹಾಗೂ ಗ್ರೂಪ್ ಡಿ ನೌಕಕರ 2 ಕಟ್ಟಡದ ಕಾಮಗಾರಿ ನಡೆಯುತ್ತಿದೆ.

ಸ್ಥಳ ಪರಿಶೀಲನೆ ಮಾಡಿದ್ದೇನೆ. ಕಾಮಗಾರಿ ನನ್ನ ಗಮನಕ್ಕೂ ಬಂದಿದೆ. ಈ ರೀತಿ ಕೆಲಸ ಮಾಡದಂತೆ ಗುತ್ತಿಗೆದಾರರಿಗೆ ಮಾರ್ಗದರ್ಶನ ನೀಡಿ, ನೋಟೀಸ್ ನೀಡಲಾಗಿದೆ. ಮತ್ತೆ ಹೊಸದಾಗಿ ಕಾಮಗಾರಿ ಮಾಡಿಸುತ್ತೇವೆ.ಹರೀಶ್ ,ಜಿಪಂ ಇಂಜಿನಿಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net