

ಬೆಂಗಳೂರು: ಬಿಬಿಎಂಪಿಯಲ್ಲಿ ಹೊಸದಾಗಿ ಏಕೀಕೃತ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಜಾರಿಗೆ ತರುವ ನೆಪದಲ್ಲಿ ಕೋಟ್ಯಂತರ ರೂ. ಮೊತ್ತವನ್ನು ಕೊಳ್ಳೆ ಹೊಡೆಯಲು ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ ಎಂದು ಪಾಲಿಕೆಯ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
ಪಾಲಿಕೆಯ 198 ವಾರ್ಡ್‌ಗಳ ವ್ಯಾಪ್ತಿಯಲ್ಲಿ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆಂದು ಪ್ರಸ್ತುತ ವರ್ಷವೊಂದಕ್ಕೆ 450 ಕೋಟಿ ರೂ. ಹಣ ವೆಚ್ಚ ಮಾಡಲಾಗುತ್ತಿದೆ. ಹೈಕೋರ್ಟ್ ಆದೇಶದಂತೆ 89 ಪ್ಯಾಕೇಜ್ಗಳಾಗಿ ವಿಂಗಡಿಸಿ ಹೊಸದಾಗಿ ಟೆಂಡರ್ ಆಹ್ವಾನಿಸಿ 510 ಕೋಟಿ ರೂ. ವೆಚ್ಚಕ್ಕೆ ಅಂತಿಮಗೊಳಿಸಬೇಕಿತ್ತು. ಆದರೆ, ಏಕೀಕೃತ ಘನತ್ಯಾಜ್ಯ ನಿರ್ವಹಣೆ ಹೆಸರಿನಲ್ಲಿ 30 ವರ್ಷಕ್ಕೆ ಗುತ್ತಿಗೆಯನ್ನು ಕಪ್ಪುಪಟ್ಟಿ ಸೇರಿರುವ ಕಂಪನಿಗೆ ನೀಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂದು ಮಂಗಳವಾರ ದೂರಿದ್ದಾರೆ.
ಈಗಾಗಲೇ ಪಾಲಿಕೆಯು ಮಂಡೂರು, ದೊಡ್ಡಬಳ್ಳಾಪುರ, ಗೊಲ್ಲಹಳ್ಳಿ ಹಾಗೂ ಬಿಡದಿ ಬಳಿ ತಲಾ 100 ಎಕರೆ ವಿಸ್ತೀರ್ಣದಲ್ಲಿ ತ್ಯಾಜ್ಯ ನಿರ್ವಹಣೆ ಕಾರ್ಯಕ್ಕೆ ಅಗತ್ಯ ಮೂಲಸೌಲಭ್ಯವನ್ನು ಕಲ್ಪಿಸಿದೆ. ವಸ್ತುಸ್ಥಿತಿ ಹೀಗಿದ್ದರೂ, ನಿತ್ಯ ಉತ್ಪತ್ತಿಯಾಗುತ್ತಿರುವ 3,500-4,000 ಮೆಟ್ರಿಕ್ ಟನ್ ತ್ಯಾಜ್ಯದ ಬದಲಾಗಿ 6,500 ಮೆಟಿಕ್ ಟನ್ ಪ್ರಮಾಣಕ್ಕೆ ಏರಿಸಿದೆ. ಇದರಿಂದಾಗಿ ಪ್ರತೀ ಟನ್ ತ್ಯಾಜ್ಯ ಸಂಗ್ರಹಣೆ/ಸಾಗಣೆಗೆ 1,300 ರೂ. ವೆಚ್ಚದ ಮೊತ್ತವನ್ನು 2,343 ರೂ.ಗೆ ಹೆಚ್ಚಿಸಲಾಗಿದೆ. ಜತೆಗೆ ಪ್ರತಿ ಟನ್ ತ್ಯಾಜ್ಯ ಸಂಸ್ಕರಣೆಗೆ ಕಂಪನಿಗೆ ನೀಡುತ್ತಿರುವ 260 ರೂ. ಮೊತ್ತವನ್ನು 650 ರೂ. ಹಿಗ್ಗಿಸಿದೆ. ತ್ಯಾಜ್ಯ ಸಂಗ್ರಹ ಕಾರ್ಯಕ್ಕೆ ಪ್ರತಿಯೊಂದು ಮನೆಯಿಂದ ಮಾಸಿಕ ಕಸದ ಕರ ಸಂಗ್ರಹಿಸುತ್ತಿದೆ. ಹೊಸ ಟೆಂಡರ್‌ನಲ್ಲಿ ಗುತ್ತಿಗೆ ಕಂಪನಿಯೇ ಕರ ವಸೂಲು ಮಾಡುವುದರಿಂ ಆ ಹಣ ಪಾಲಿಕೆಗೆ ಸೇರದೆ ನಷ್ಟವಾಗಲಿದೆ ಎಂದು ಅವರು ಆರೋಪಿಸಿದ್ದಾರೆ.
ಜಮೀನು ಅಡವಿಟ್ಟು ಸಾಲಕ್ಕೆ ಚಿತಾವಣೆ?:
ಹೊಸ ಗುತ್ತಿಗೆದಾರರಿಗೆ ನೀಡಲಾಗುವ ಹಣವನ್ನು ಪ್ರತೀ ವರ್ಷ ಶೇ.10ರಷ್ಟು ಏರಿಕೆ ಮಾಡಲಾಗುತ್ತದೆ. ಮುಖ್ಯವಾಗಿ ಸರ್ಕಾರ ಖರೀದಿಸಿರುವ 4 ಸ್ಥಳಗಳಲ್ಲಿನ ತಲಾ 100 ಎಕರೆ ಜಮೀನನ್ನು ಗುತ್ತಿಗೆದಾರರು ಯೋಜನೆಯ ಅನುಷ್ಠಾನಕ್ಕಾಗಿ ಅಡವಿಟ್ಟು ವಿಶ್ವಬ್ಯಾಂಕ್ ಸೇರಿ ವಿವಿಧ ಹಣಕಾಸು ಸಂಸ್ಥೆಗಳಿಂದ ಗರಿಷ್ಠ 3,500 ಕೋಟಿ ರೂ. ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ನಾಲ್ಕೂ ಸ್ಥಳಗಳಲ್ಲಿ ಉದ್ದೇಶಿತ ಯೋಜನೆ ಜಾರಿಗಾಗಿ ಗುತ್ತಿಗೆದಾರರಿಗೆ 1,500 ಕೋಟಿ ರೂ. ಸಾಕಿದ್ದರೂ, ಬೇಕೆಂದೇ ನಿಯಮಾವಳಿಗಳನ್ನು ಸಡಿಲ ಮಾಡಲಾಗಿದೆ. 30 ವರ್ಷದ ಗುತ್ತಿಗೆ ಅವಧಿ ಇರುವುದರಿಂದ ಒಟ್ಟಾರೆ ಯೋಜನೆಯಿಂದ 45,000 ಕೋಟಿ ರೂ. ಪಾಲಿಕೆ ಹಾಗೂ ಸರ್ಕಾರಕ್ಕೆ ನಷ್ಟವಾಗಲಿರುವುದರಿಂದ ಟೆಂಡರ್ ಅಂತಿಮಗೊಳಿಸಬಾರದು ಎಂದು ಎನ್.ಆರ್.ರಮೇಶ್ ಸಿಎಂ ಅವರನ್ನು ಒತ್ತಾಯಿಸಿದ್ದಾರೆ.