

ಸರಗೂರು: ದಿನಸಿ ಪದಾರ್ಥ ನೀಡುವುದಾಗಿ ಗ್ರಾಹಕರಿಂದ ಹಣ ಕಟ್ಟಿಸಿಕೊಂಡು ಕೋಟ್ಯಂತರ ರೂ. ವಂಚಿಸಿದ್ದ ಅಂಗಡಿ ಮಾಲೀಕನನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.
ಕೋಲಾರ ಮೂಲದ ಶೋಭಾನ್ ಬಾಬು ಬಂಧಿತ ಆರೋಪಿ. ಈತ ಪಟ್ಟಣದ ಶಿವರಾಜು ಕಾಂಪ್ಲೆಕ್ಸ್‌ನಲ್ಲಿ ಎನ್‌ಎಸ್‌ಆರ್‌ಎಲ್ ಎಂಬ ಹೆಸರಿನಲ್ಲಿ ಅಂಗಡಿಯೊಂದನ್ನು ತೆರೆದು ತಾಲೂಕಿನ ಜನರ ವಿಶ್ವಾಸ ಗಳಿಸಿದ್ದ. ಗ್ರಾಹಕರಿಂದ ಹಣ ಕಟ್ಟಿಸಿಕೊಂಡು ದಿನಸಿ ಪದಾರ್ಥಗಳನ್ನು ನೀಡುತ್ತಿದ್ದ. ಆರಂಭದಲ್ಲಿ ಸಕಾಲಕ್ಕೆ ದಿನಸಿ ಪೂರೈಸುವ ಮೂಲಕ ಜನರ ನಂಬಿಕೆ ಗಳಿಸಿದ್ದ. ಹೀಗಾಗಿ, ಬಹುತೇಕರು ಈತನಿಂದ ಕಾರ್ಡ್ ಪಡೆದು ಹಣ ನೀಡುತ್ತಿದ್ದರು. ಆದರೆ ಎರಡು ತಿಂಗಳ ಹಿಂದೆ ಗ್ರಾಹಕರಿಂದ ಕಟ್ಟಿಸಿಕೊಂಡು, ದಿನಸಿ ನೀಡದೆ ವಂಚಿಸಿ ಪರಾರಿಯಾಗಿದ್ದನು. ಇತ್ತೀಚೆಗೆ ಅಂಗಡಿಗೆ ಬಂದಾಗ ಸಾರ್ವಜನಿಕರ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ವಿವಿಧ ಗ್ರಾಮಗಳ ಸುಮಾರು 4000 ಜನರಿಂದ ಏಜೆಂಟ್ ಮೂಲಕ ಕಾರ್ಡ್ ಮಾಡಿಸಿದ್ದ. ಒಂದು ತಿಂಗಳಿಗೆ ದಿನಸಿ ನೀಡುತ್ತೇನೆಂದು ತಲಾ 3600 ರೂ.ಗಳಂತೆ ಪ್ರತಿ ಗ್ರಾಮದಲ್ಲಿ 250ರಿಂದ 500 ಗ್ರಾಹಕರಿಂದ ಹಣ ಪಡೆದಿದ್ದ. ಆದರೆ ಎರಡು ತಿಂಗಳಿಂದ ದಿನಸಿ ನೀಡಿದೆ ಪರಾರಿಯಾಗಿದ್ದ. 2 ಕೋಟಿ ರೂ.ಗೂ ಹೆಚ್ಚು ಹಣ ಲೂಟಿ ಮಾಡಿದ್ದಾನೆ ಎಂಬ ಆರೋಪವಿದೆ.