

ಶಿವಮೊಗ್ಗ: ಸಾಗುವಾನಿ ಮತ್ತು ಬೀಟೆ ಮರಗಳ ಕಡಿತಲೆ ಮಾಡಿದ ಆರೋಪಿಯನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, 1.5 ಲಕ್ಷ ರೂ. ಮೌಲ್ಯದ ನಾಟಾವನ್ನು ಜಪ್ತಿ ಮಾಡಿದ್ದಾರೆ.
ಹಾರೋಹಿತ್ಲು ಗ್ರಾಮದ ವಾಸುದೇವ ಬಂಧಿತ ಆರೋಪಿ. ಶೆಟ್ಟಿಹಳ್ಳಿ ಅಭಯಾರಣ್ಯದ ಶಿವಮೊಗ್ಗ ವನ್ಯಜೀವಿ ವಿಭಾಗದ ಹಣಗೆರೆ ವನ್ಯಜೀವಿ ವಲಯ ವ್ಯಾಪ್ತಿಯ ಹಾರೋಹಿತ್ಲು ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಅಕ್ರಮವಾಗಿ ಒಂದು ಬೀಟೆ ಮತ್ತು ಎರಡು ಸಾಗುವಾನಿ ಮರಗಳನ್ನು ಕಡಿತಲೆ ಮಾಡಲಾಗಿತ್ತು.
ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ಹಾಗೂ ಎಸಿಎಫ್ ಬಿ.ಸುರೇಶ ಅವರ ಮಾರ್ಗದರ್ಶನದಲ್ಲಿ ಭಾನುವಾರ ಶಿವಮೊಗ್ಗದ ಗೋಲ್ಡನ್‌ಸಿಟಿ ಕಾಲನಿಯ ನಿರ್ಮಾಣ ಹಂತದ ವಾಸುದೇವ ಅವರ ಮಗಳ ಮನೆಯಲ್ಲಿ ಅಕ್ರಮ ದಾಸ್ತಾನು ಪತ್ತೆ ಆಗಿತ್ತು. ಬೀಟೆ ಮತ್ತು ಸಾಗುವಾನಿ ಜಾತಿಯ ಸೈಜುಗಳು, ಒಂದು ಮಾರುತಿ ಓಮ್ನಿ ಕಾರು, ಒಂದು ಪ್ಲೇನಿಂಗ್ ಮಷಿನ್ ಅನ್ನು ಜಪ್ತಿ ಮಾಡಲಾಗಿದೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಸಿರಿಗೆರೆ ಆರ್‌ಎಫ್‌ಒ ಗಿರೀಶ್ ನಾಯ್ಕ, ಡಿಆರ್‌ಎಫ್‌ಒ ಬಿ.ಕೆ.ನಾಗರಾಜು, ಗಸ್ತು ಅರಣ್ಯ ಪಾಲಕರಾದ ಚಿಕ್ಕಪ್ಪ, ಔರಂಗಜೇಬ, ಯೋಗೇಶ್ವರಪ್ಪ ಅವರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.