ಕಾನ್‌ಸ್ಟೇಬಲ್ ಮೇಲೆ ಹಲ್ಲೆಗೈದ ಆರೋಪಿಗಳು ಕೇರಳದಲ್ಲಿ ಬಂಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ನಗರದಲ್ಲಿ ಬೀಟ್ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಮೇ 24ರಂದು ಬೆಳಗ್ಗಿನ ಜಾವ ಸ್ಕೂಟರ್ ನಲ್ಲಿ ಬಂದು ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಕೊಕ್ಕಡ ಅರಸಿನಮಕ್ಕಿಯ ಸಚಿನ್ ಕೆ.ಆರ್. (24) ಹಾಗೂ ನೆಲ್ಯಾಡಿಯ ಮಣ್ಣಗುಂಡಿ ಹೌಸ್‌ನ ಚಂದನ್ (24) ಬಂಧಿತರು.
ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ನಾರಾಯಣಗುರು ಸಮುದಾಯ ಭವನ ರಸ್ತೆಯ ಎದುರು ಬೀಟ್ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕೆಂಪು ಬಣ್ಣದ ಎಲೆಕ್ಟ್ರಿಕಲ್ ಸ್ಕೂಟರ್ ನಲ್ಲಿ ಬಂದ ಇಬ್ಬರು ಯುವಕರಲ್ಲಿ, ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಏಕಾಏಕಿ ಸಿಮೆಂಟ್ ಶೀಟ್ ನ ತುಂಡಿನಿಂದ ಪೊಲೀಸ್ ಸಿಬ್ಬಂದಿಯ ತಲೆಗೆ ಹೊಡೆದು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಪರಿಣಾಮವಾಗಿ ಪೊಲೀಸ್ ಸಿಬ್ಬಂದಿಯ ತಲೆಗೆ ಗಾಯ ಉಂಟಾಗಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಯತ್ನ ನಡೆಸಿರುವ ಬಗ್ಗೆ, ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಗುರುತಿಸಿ ತನಿಖೆಯಲ್ಲಿ ದೊರಕಿತ ಸಾಕ್ಷ್ಯಾಧಾರ ಮತ್ತು ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ಆರೋಪಿಗಳನ್ನು ಕೇರಳ ರಾಜ್ಯದ ಕಾಂಞಗಾಡ್ ಪ್ರದೇಶದಲ್ಲಿ ಮಂಗಳವಾರ ಸಿಸಿಬಿ ಪೊಲೀಸರು ವಶಕ್ಕೆ ಪಡೆದು, ಮುಂದಿನ ಕ್ರಮಕ್ಕಾಗಿ ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಕೃತ್ಯಕ್ಕೆ ಉಪಯೋಗಿಸಿರುವ ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಮಂಗಳೂರಿನ ಅಶೋಕನಗರದ ಫಲ್ಗುಣಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆರೋಪಿಗಳ ಪೈಕಿ ಸಚಿನ್ ಕೆ.ಆರ್ ಎಂಬಾತನು ಕುಂಟಿಕಾನದ ಪ್ಯಾಕ್ಟರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಮತ್ತೊಬ್ಬ ಆರೋಪಿ ಚಂದನ್ ಕೂಳೂರಿನಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದನು. ಮದ್ಯರಾತ್ರಿ ವೇಳೆಗೆ ನಗರದಲ್ಲಿ ಸುತ್ತಾಡುತ್ತಿದ್ದ ಆರೋಪಿಗಳನ್ನು ಬೀಟ್ ಪೊಲೀಸರು ತಡೆದು ಪ್ರಶ್ನಿಸಿದ್ದಕ್ಕೆ ಸಿಟ್ಟುಗೊಂಡು ಪೊಲೀಸರ ಮೇಲೆ ಸಿಮೆಂಟ್ ಸೀಟಿನ ತುಂಡಿನಿಂದ ಹಲ್ಲೆ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net