ಆರೋಪಿ ಗಡಿಪಾರಿಗೆ ಅಬ್ಬಯ್ಯ ಒತ್ತಾಯ

abbayya
Published on

ಹುಬ್ಬಳ್ಳಿ: ದಲಿತ ಸಮುದಾಯ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಕುಂದಗೋಳ ತಾಲೂಕಿನ ಚಿಕ್ಕಗುಂಜಾಳ ಗ್ರಾಮದ ಆರೋಪಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದ ಶಾಸಕ ಪ್ರಸಾದ ಅಬ್ಬಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಇಂಥ ಘಟನೆಗಳಿಗೆ ವಿರೋಧ ಪಕ್ಷದ ಕೆಲ ನಾಯಕರ ಪ್ರಚೋದನಕಾರಿ ಭಾಷಣವೇ ಕಾರಣ. ಪೋಸ್ಟ್ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಈತನ ಹಿಂದೆ ಇರುವ ಮತೀಯ ಶಕ್ತಿಗಳನ್ನು ಕೂಡ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆ ಗೆಲ್ಲಲು ವಿರೋಧಿಗಳು ಕಾರ್ಯತಂತ್ರ ರೂಪಿಸಿದಂತೆ ಕಾಣುತ್ತಿದೆ. ಎಲ್ಲೆಡೆ ಕೋಮು ಸೌಹಾರ್ದ ಕದಡಿ, ಜನರ ಮಧ್ಯದಲ್ಲೆ ಜಗಳ ಹಚ್ಚುವ ಕಾರ್ಯವಾಗುತ್ತಿದೆ. ಯುವಕರು ಪ್ರಚೋದನೆಗೆ ಒಳಗಾಗದೇ ವಿವೇಕದಿಂದ ವರ್ತಿಸಬೇಕು. ಒಳಿತು-ಕೆಡಕುಗಳ ಬಗ್ಗೆ ಅವಲೋಕಿಸಿ ಬುದ್ಧ, ಬಸವ, ಅಂಬೇಡ್ಕರ್ ಅವರ ಆಶಯದಂತೆ ಸೌಹಾರ್ದ ಮತ್ತು ಸಮನ್ವಯತೆಯಿಂದ ಜೀವನ ನಡೆಸಬೇಕು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net