ಆರೋಪಿ ಚಿನ್ನಯ್ಯ- ತಿಮರೋಡಿ ವಿಡಿಯೋ ವೈರಲ್

Published on

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಪ್ರಸಕ್ತ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಚಿನ್ನಯ್ಯ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿದಪ್ರಕರಣದಲ್ಲಿ ತಲೆಮರೆಸಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಡುವಿನ ಭೇಟಿಯ ಒಂದು ವಿಡಿಯೋ ಶುಕ್ರವಾರ ವೈರಲ್ ಆದ ಬಳಿಕ ಈಗ ಎರಡು ಮತ್ತು ಮೂರನೇ ವಿಡಿಯೋ ಶನಿವಾರ ಹೊರಗೆ ಬಂದಿದ್ದು, ವೈರಲ್ ಆಗಿದೆ.

ಈ ಎರಡು ವಿಡಿಯೋಗಳಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ಅನೇಕ ಶವಗಳನ್ನು ಹೂತಿದ್ದೇನೆ, ಎಲ್ಲವೂ ಅನಾಥ ಶವಗಳು. ತರಕಾರಿ ಗಾಡಿಯಲ್ಲೂ ತಂದು ಹೂಳಿದ್ದೇನೆ. 1ರಿಂದ 17 ಪಾಯಿಂಟ್ ವರೆಗೆ ಶವಗಳು ಇರುವ ಬಗ್ಗೆ ಚಿನ್ನಯ್ಯ ಹೇಳುತ್ತಿರುವುದು ವಿಡಿಯೋದಲ್ಲಿದೆ. ನಾನು ಹೂಳಿದ ಶವಗಳಿಗೆ ಲೆಕ್ಕವಿಲ್ಲ ಎಂಬಿತ್ಯಾದಿ ಚಿನ್ನಯ್ಯ ಮಾತನಾಡಿರುವುದು ಸಂಭಾಷಣೆಯಲ್ಲಿ ಕಂಡುಬರುತ್ತದೆ. ಈ ವಿಡಿಯೋದ ಅಸಲಿಯತ್ತು ಸ್ಪಷ್ಟವಾಗಿಲ್ಲ. ಇದು ಎರಡು ವರ್ಷ ಹಿಂದಿನದ್ದು ಎಂದಿದ್ದರೂ ಅಲ್ಲಿ ಕಂಡುಬರುವ ಹ್ಯಾಂಡ್‌ವಾಷ್ 2025 ಜೂನ್ ತಿಂಗಳನ್ನು ತೋರಿಸುತ್ತಿರುವುದನ್ನು ಯಾರೋ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಅದು ಕೂಡ ವೈರಲ್ ಆಗಿದೆ.

ಇದೇ ವಿಡಿಯೋದಲ್ಲಿ ಅನಾಥ ಶವಗಳ ಬಗ್ಗೆ ಕಾಡಿನಲ್ಲಿ ಗುರುತಿಸಿದ ಸ್ಪಾಟ್ ನಂಬರ್ 13ರ ಬಗ್ಗೆಯೂ ಉಲ್ಲೇಖಿಸಲಾಗಿದೆ. ಧರ್ಮಸ್ಥಳ ಗ್ರಾಮದ ತಿರುವೊಂದರಲ್ಲಿ ಬರೋಬ್ಬರಿ 70 ಕ್ಕೂ ಅಧಿಕ ಶವ ಹೂತು ಹಾಕಿದ್ದೇನೆ. ಕೇರಳ ಮೂಲದ ಹೆಂಗಸಿನ ಶವವನ್ನೂ ಹೂತಿದ್ದೇನೆ. ಅದು ಸ್ಮಶಾನ ಅಲ್ಲ, ನೇತ್ರಾವತಿ ತೀರದಲ್ಲಿ ಹೆಣ ಹೂತುಹಾಕಿದ್ದಕ್ಕೆ ಲೆಕ್ಕವೇ ಇಲ್ಲ. ಪೊಲೀಸರ ಬಂದೂಕು ಭದ್ರತೆ ನೀಡಿದರೆ ಹೂತಿಟ್ಟ ಜಾಗ ತೋರಿಸುತ್ತೇನೆ ಎಂದಿದ್ದ ಚಿನ್ನಯ್ಯ. ಅದಕ್ಕೆ ತಿಮರೋಡಿ, ಕೋರ್ಟ್‌ನಿಂದ ನಿಮ್ಮ ಇಡೀ ಕುಟುಂಬಕ್ಕೆ ಭದ್ರತೆ ಕೊಡಿಸುತ್ತೇನೆ ಎಂದಿದ್ದಾರೆ. ಪಾಯಿಂಟ್ ನಂಬರ್ 17 ಸ್ಟೋರಿಯನ್ನೂ ಚಿನ್ನಯ್ಯ ಹೇಳಿದ್ದ. ನೇತ್ರಾವತಿ ಸ್ನಾನಘಟ್ಟದ ಹೊಟೇಲ್ ಬಳಿ 12 ರಿಂದ 14 ವರ್ಷ ವಯಸ್ಸಿನ ಹುಡುಗಿಯ ಶವ, ಪಾಯಿಂಟ್ ನಂಬರ್ 8 ರ ಸ್ಟೋರಿ, ಬಂಗ್ಲೆಗುಡ್ಡದ ಬುಡದಲ್ಲಿ 8-9 ಶವ ಹೂತು ಹಾಕಿದ್ದಾಗಿ ಚಿನ್ನಯ್ಯ ಹೇಳಿರುವುದು ವಿಡಿಯೋದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net