

ಮಂಗಳೂರು: ಅಂದು ಸರ್ಕಾರಿ ಕಚೇರಿಯಲ್ಲಿ ತಲವಾರ್ ಬೀಸಿ ಭಯ ಹುಟ್ಟಿಸಿದ್ದವ ಇಂದು ಬದುಕಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದ್ದಾನೆ. ಆರೋಪಿ ನವೀನ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಜೈಲ್ ವಾರ್ಡ್ನಲ್ಲಿ ಇಂದು ಈ ಆತ್ಮಹತ್ಯೆ ಯತ್ನ ಪ್ರಕರಣ ನಡೆದಿದೆ. ಆಸ್ಪತ್ರೆಯ ಜೈಲು ವಾರ್ಡ್ನ ಕಿಟಕಿಗೆ ಬೆಡ್ಶೀಟ್ ಕಟ್ಟಿ ನೇಣು ಬಿಗಿದುಕೊಂಡ ನವೀನ್ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ವಾರ್ಡ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಆರೋಪಿ ನವೀನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮಂಗಳೂರಿನ ಕರಂಗಲಪಾಡಿ ಬಳಿ ಇರುವ ಸರ್ಕಾರಿ ಕಚೇರಿ ಡಯಟ್ನಲ್ಲಿ ಸೆ.20ರಂದು ತಲವಾರ್ ಬೀಸಿ ಸಿಬ್ಬಂದಿಯನ್ನು ಬೆದರಿಸಿದ್ದ ಪ್ರಕರಣದಲ್ಲಿ ನವೀನ್ನನ್ನು ಬಂಧಿಸಲಾಗಿತ್ತು. ಅಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಒಳಗೆ ನಿರ್ಮಲ, ರೀನಾ ರಾಯ್, ಗುಣವತಿ ಎಂಬವರ ಮೇಲೆ ಈತ ದಾಳಿ ನಡೆಸಿದ್ದ. ಶಿಕ್ಷಕಿಯೊಬ್ಬರ ಮೇಲೆ ಪೂರ್ವದ್ವೇಷದಿಂದಾಗಿ ಆತ ಈ ದಾಳಿ ನಡೆಸಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿತ್ತು.