ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೇರಿಹಿಲ್ ಹ್ಯಾಲಿಪ್ಯಾಡ್ ಮೈದಾನದ ಬಳಿ ಬುಧವಾರ 1.56 ಲಕ್ಷ ರೂ. ಮೌಲ್ಯದ 3.138 ಕಿ.ಗ್ರಾಂ ಗಾಂಜಾ ಸಮೇತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಮುಕ್ಕಚೇರಿ ಹಿಲರಿಯ ನಗರ ನಿವಾಸಿ ಇರ್ಷಾದ್ ಅಲಿಯಾಸ್ ಇರ್ಷಾ (26) ಬಂಧಿತ ಆರೋಪಿ. ಖಚಿತ ಮಾಹಿತಿ ಆಧರಿಸಿ ಪಣಂಬೂರು ಎಸಿಪಿ ತಂಡ ಹಾಗೂ ಕಾವೂರು ಠಾಣೆಯ ಜಂಟಿ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದೆ.
ಬಂಧಿತನಿಂದ ಸುಮಾರು 3 ಕೆಜಿ 138 ಗ್ರಾಂ (ಅಂದಾಜು ಮೌಲ್ಯ 1,56,000ರೂ.), ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಮತ್ತು ಸ್ಕೂಟರ್ ಸೇರಿದಂತೆ ಇತರೆ ಪರಿಕರಗಳನ್ನು ಪೊಲೀಸರು ವಶಪಡಿಸಿದ್ದಾರೆ.
ಬಂಧಿತ ಆರೋಪಿ ಇರ್ಷಾದ್ ಹಳೇ ಅಪರಾಧ ಹಿನ್ನೆಲೆ ಹೊಂದಿದ್ದು, ಈ ಹಿಂದೆ ಆತನ ವಿರುದ್ಧ ಗಂಭೀರ ಪ್ರಕರಣಗಳು ದಾಖಲಾಗಿವೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಮತ್ತು ಆರ್ಮ್ಸ್ ಆಕ್ಟ್ (ಆಯುಧ ಕಾಯ್ದೆ) ಅಡಿಯಲ್ಲಿ ಪ್ರಕರಣ,
ಮಂಗಳೂರು ಸಿ.ಎಸ್.ಪಿ (ಕರಾವಳಿ ಭದ್ರತಾ ಪೊಲೀಸ್) ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಮಾದಕ ವಸ್ತು ಮಾರಾಟ ಪ್ರಕರಣ, ಪ್ರಸ್ತುತ ಕಾವೂರು ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಹೊಸ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿ ಪ್ರಕಟಣೆ ತಿಳಿಸಿದೆ.