

ಶಿವಮೊಗ್ಗ: ಭದ್ರಾವತಿ ಬಿ.ಎಚ್.ರಸ್ತೆಯ ಮೀನುಗಾರರ ಬೀದಿಯ ಮೀನಿನ ವ್ಯಾಪಾರಿ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿದ್ದು, ಆತನಿಂದ 1.12 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮೊಬೈಲ್ ಮತ್ತು ಹಣವನ್ನು ಜಪ್ತಿ ಮಾಡಿದ್ದಾರೆ.
ಮೀನುಗಾರರ ಬೀದಿಯ ಪಿ.ಜೈಕಾಂತ್ (21) ಬಂಧಿತ ಆರೋಪಿ. ಮೇ 2ರಂದು ರಾತ್ರಿ ಮೀನಿನ ವ್ಯಾಪಾರಿ ಕೆ.ಬಾಲಕೃಷ್ಣನ್ ಎಂಬುವರ ಮನೆ ಮೇಲಿನ ಸಿಮೆಂಟ್ ಶೀಟನ್ನು ಒಡೆದು ಒಳನುಗ್ಗಿ ಬೀರುವಿನಲ್ಲಿದ್ದ 1.02 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ, ವಾಚ್ ಮತ್ತು ನಗದು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಬಾಲಕೃಷ್ಣನ್ ಭದ್ರಾವತಿ ನ್ಯೂಟೌನ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಡಿವೈಎಸ್‌ಪಿ ನಾಗರಾಜ್, ವೃತ್ತ ನಿರೀಕ್ಷಕ ಶ್ರೀಶೈಲಕುಮಾರ್ ಮೇಲ್ವಿಚಾರಣೆಯಲ್ಲಿ ಟಿ.ರಮೇಶ್, ಪಿಎಸ್‌ಐ ನ್ಯೂಟೌನ್ ಠಾಣೆ ನೇತೃತ್ವದ ಸಿಬ್ಬಂದಿಗಳಾದ ಟಿ.ಪಿ.ಮಂಜಪ್ಪ, ನವೀನ್, ನಾಗರಾಜ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಆರೋಪಿಯನ್ನು ಬಂಧಿಸಿ, 11.300 ಗ್ರಾಂ ಬಂಗಾರದ ಅಭರಣ, ಒಂದು ವಾಚ್, 2000 ರೂ. ನಗದು ಹಾಗೂ ಮೊಬೈಲ್ ಜಪ್ತಿ ಮಾಡಿದ್ದಾರೆ.