ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡಿದ್ದ ಆರೋಪಿ ಬಂಧನ

30adarshkdga2
Published on

ಮಡಿಕೇರಿ: ಎಂಟಿಎಂನಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದ ಆರೋಪಿ ಬಂಧಿಸುವಲ್ಲಿ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೋಳ ಹೋಬಳಿಯ ಬೆಲಸಿಂದ ಗ್ರಾಮ ನಿವಾಸಿ ಕಿರಣ್ ಕುಮಾರ್(30) ಬಂಧಿತ ಆರೋಪಿ. ಜಿಲ್ಲೆಯ ಸೋಮವಾರಪೇಟೆ ಹಾಗೂ ಕುಶಾಲನಗರದಲ್ಲಿ ಹಣ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಎಟಿಎಂ ಕೇಂದ್ರಗಳಿಗೆ ಕಾರ್ಡ್ ಬಳಸಿ ಹಣ ಪಡೆಯಲು ತಿಳಿಯದವರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಕಾರ್ಡ್ ಪಡೆದು ಗ್ರಾಹಕರಿಗೆ ಬೇರೆ ಕಾರ್ಡ್ ನೀಡಿ ಹಣ ಲಪಟಾಹಿಸುತ್ತಿದ್ದ. ಹೀಗೆ ಸೋಮವಾರಪೇಟೆಯಲ್ಲಿ ರೂ 1.95 ಲಕ್ಷ ಹಾಗೂ ಕುಶಾಲನಗರದಲ್ಲಿ 1.15 ಲಕ್ಷದಷ್ಟು ಹಣ ಲಪಟಾಹಿಸಿದ್ದ. ಈ ಬಗ್ಗೆ ಜಿಲ್ಲಾ ಸೈಬರ್ ಕ್ರೈಂಗೆ ದೊರೆತ ದೂರಿನನ್ವಯ ಪೊಲೀಸರು ತಂಡ ರಚನೆ ಮಾಡಿ ವಂಚಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕುಮಟಾದಲ್ಲಿ ಸೆರೆ: ಕಿರಣ್ ಕುಮಾರ್ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನೆಲೆಸಿರುವ ಖಚಿತ ಮಾಹಿತಿ ತಿಳಿದಿದೆ. ಎಚ್ಚೆತ್ತ ಪೊಲೀಸರು ಆರೋಪಿಯ ಸೆರೆಗೆ ಬಲೆ ಬೀಸಿ ಸೆರೆಹಿಡಿದ್ದಾರೆ. ನಂತರ ವಿಚಾರಣೆ ಸಂದರ್ಭ ವಂಚಿಸಿದ ಹಣದಲ್ಲಿ ಚಿನ್ನ-ಬೆಳ್ಳಿ ಸಾಮಗ್ರಿ ಖರೀಸಿರುವುದಾಗಿ ತಿಳಿಸಿದ್ದಾನೆ. ಆರೋಪಿ ಬಳಿಯಿದ್ದ 58 ಗ್ರಾಂ ಚಿನ್ನ 294 ಗ್ರಾಂ ಬೆಳ್ಳಿಯ ಆಭರಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೊ.ಸಂ 19/2021 ಕಲಂ 66(ಸಿ) ಮತ್ತು (ಡಿ) ಐ.ಟಿ ಕಾಯ್ದೆ ಮತ್ತು 419,420 ಐಪಿಸಿ ಮತ್ತು ಮೊ ಸಂ 20/2021 ಕಲಂ 66(ಸಿ) &(ಡಿ) ಐ.ಟಿ ಕಾಯ್ದೆ ಮತ್ತು 419, 420 ಐಪಿಸಿ ಸೆಕ್ಷನ್‌ನಡಿ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರ ಮಾರ್ಗದರ್ಶನದಲ್ಲಿ ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಅಪರಾಧ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಎಸ್.ಎಸ್.ರವಿಕಿರಣ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ಎಂ.ಪಿ.ಕಾರ್ಯಪ್ಪ, ಎಸ್.ಸಿ.ಪ್ರಕಾಶ್, ಬಿ.ಕೆ.ದೀಪಕ್, ಟಿ.ಎಸ್.ಮಂಜುನಾಥ್, ಕೆ.ಬಿ.ದೇವಿಪ್ರಸಾದಿನಿ, ಮಂಜುನಾಥ ಚವಡಿ, ಸಿಡಿಆರ್ ವಿಭಾಗದ ರಾಜೇಶ್, ಗಿರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net