17 ವರ್ಷ ನಂತರ ಸೆರೆಸಿಕ್ಕ ಪತ್ನಿ ಹಂತಕ!

8 lxr 1( virayya)
Published on

ಲಕ್ಷ್ಮೇಶ್ವರ: ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಪಾಪಿ ಪತಿ 17 ವರ್ಷಗಳ ನಂತರ ಪೊಲೀಸರ ಬಲೆಗೆ ಬಿದ್ದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ವಿವರ: ಶಿರಹಟ್ಟಿ ತಾಲೂಕಿನ ಅಂಕಲಿ ಗ್ರಾಮದಲ್ಲಿ 2004, ಡಿ.16 ರಂದು ವೀರಯ್ಯ ಹಿರೇಮಠ ಎಂಬಾತ ಪತ್ನಿ ಈರಮ್ಮಳನ್ನು ಭೀಕರವಾಗಿ ಕೊಲೆ ಮಾಡಿದ್ದ. ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಗ್ರಾಮದ ಹತ್ತಿರದ ಹಳ್ಳಕ್ಕೆ ಕರೆದುಕೊಂಡು ಹೋಗಿ ಕೊಡಲಿಯಿಂದ ತುಂಡು ತುಂಡಾಗಿ ಕತ್ತರಿಸಿದ್ದ. ಪತಿ-ಪತ್ನಿ ಇಬ್ಬರೂ ಬೇರೆ ಊರಿಗೆ ಹೋಗಿರಬಹುದು ಎಂದು ಸಂಬಂಧಿಕರು ಮತ್ತು ಗ್ರಾಮಸ್ಥರು ಸುಮ್ಮನಾಗಿದ್ದರು. 9 ದಿನಗಳ ನಂತರ ಗ್ರಾಮಸ್ಥರ ಕಣ್ಣಿಗೆ ಬಿದ್ದ ತುಂಡು ತುಂಡಾದ ದೇಹ ಹಾಗೂ ಬಟ್ಟೆಯಿಂದ ಅದು ಈರಮ್ಮಳ ಶವ ಎಂಬುದು ಪತ್ತೆಯಾಗಿತ್ತು. ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗ ಪರಾರಿಯಾಗಿದ್ದ ವೀರಯ್ಯ ಈವರೆಗೂ ಪತ್ತೆಯಾಗಿರಲಿಲ್ಲ. ಇದೀಗ ಬಳಿಕ ಎಸ್ಪಿ ಎನ್. ಯತೀಶ್ ಅವರ ಮಾರ್ಗದರ್ಶನದಲ್ಲಿ ಲಕ್ಷ್ಮೇಶ್ವರ ಠಾಣೆಯ ಸಿಪಿಐ ವಿಕಾಸ ಲಮಾಣಿ, ಪಿಎಸ್​ಐ ನೇತೃತ್ವದಲ್ಲಿ ಎಎಸ್​ಐ ಟಿ.ಕೆ. ರಾಠೋಡ್ ಮತ್ತು ಸಿ.ಎನ್. ಕಾಕನೂರ(ಸಿಪಿಸಿ)ಅವರು ಮಂಗಳೂರಿನಲ್ಲಿ ಈತನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಾಕಿದವರಿಗೆ ದ್ರೋಹ ಬಗೆದ: ವೀರಯ್ಯ 10 ವರ್ಷದವನಿದ್ದಾಗಿನಿಂದ ಆತನ ಸಂಬಂಧಿಗಳಾದ ಗ್ರಾಮದ ಫಕೀರಯ್ಯ ಮತ್ತು ನೀಲಮ್ಮ ದಂಪತಿ ಜೋಪಾನ ಮಾಡಿದ್ದರು. ಬಳಿಕ ಗಿಡುಗನ ಕೈಗೆ ಗಿಳಿ ಕೊಟ್ಟಂತೆ ಮುದ್ದಿನ ಮಗಳನ್ನು ಆತನಿಗೆ ಮದುವೆ ಮಾಡಿಕೊಟ್ಟಿದ್ದರು. ಒಂದು ವರ್ಷ ದಾಂಪತ್ಯ ಜೀವನ ಚೆನ್ನಾಗಿತ್ತು. ಒಂದು ಮಗು ಜನಿಸಿ ಮೃತಪಟ್ಟಿತ್ತು. ಬಳಿಕ ಈರಮ್ಮ 3 ತಿಂಗಳ ಗರ್ಭಿಣಿಯಾಗಿದ್ದ ವೇಳೆ ಶೀಲ ಶಂಕಿಸಿ ಘನಘೊರವಾಗಿ ಕೊಲೆ ಮಾಡಿದ್ದ. ಇದೀಗ 17 ವರ್ಷಗಳ ಬಳಿಕ ಪೊಲೀಸರು ಈತನನ್ನು ಬಂಧಿಸಿರುವುದರಿಂದ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ ಎನ್ನುತ್ತಾರೆ ತಾಯಿ ನೀಲಮ್ಮ.

ಪ್ರಕರಣ ದಾಖಲಾದಾಗಿನಿಂದ ತಲೆಮರೆಸಿಕೊಂಡಿದ್ದ ಆರೋಪಿತನ ಪತ್ತೆಗಾಗಿ ಪೊಲೀಸರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಈತ ತನ್ನ ಹೆಸರು, ಮೂಲದ ಬಗ್ಗೆ ಸುಳ್ಳು ಹೇಳಿಕೊಂಡು ಮಂಗಳೂರಿನಲ್ಲಿ ಕಟ್ಟಡ ಕಾರ್ವಿುಕನಾಗಿ ಕೆಲಸ ಮಾಡುತ್ತಿದ್ದ. ಮಾಹಿತಿ ಬೆನ್ನತ್ತಿದ ಲಕ್ಷ್ಮೇಶ್ವರ ಪೊಲೀಸರು ವೀರಯ್ಯ ಹಿರೇಮಠನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. | ಎನ್. ಯತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net