ಆರೋಪಿಗಳನ್ನು ರಕ್ಷಿಸಲಾಗುತ್ತಿದೆ, ಸಂಸದ ಜಗದೀಶ ಶೆಟ್ಟರ್ ಆರೋಪ

IMG-20241111-WA0014.jpg
Published on

ಬೆಳಗಾವಿ: ಬೆಳಗಾವಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಎಸ್.ಡಿ.ಎ ರುದ್ರಣ್ಣ ಯಡವಣ್ಣನವರ ಆತ್ಮಹತ್ಯೆ ಮಾಡಿಕೊಂಡು ಒಂದು ವಾರ ಕಳೆದರೂ ಆರೋಪಿಗಳನ್ನು ಬಂಧಿಸದೇ, ಸರ್ಕಾರ ವಿಳಂಬ ನೀತಿ ಅನುಸರಿಸಿ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.

ಮೃತ ರುದ್ರಣ್ಣ ಯಡವಣ್ಣನವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರೈತರು ನಿರುದ್ಯೋಗಿಗಳು ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡಿದ್ದೇವೆ. ಆದರೆ, ಬೆಳಗಾವಿಯಲ್ಲಿ ಸರ್ಕಾರಿ ನೌಕರನ ಆತ್ಮಹತ್ಯೆಯಾಗಿ ಒಂದು ವಾರ ಕಳೆದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಆತ್ಮಹತ್ಯೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ, ತಹಸೀಲ್ದಾರರು ಮತ್ತು ಇನ್ನೊಬ್ಬ ಕಾರಣಭೂತರಾಗಿರುವುದು ಬೆಳಕಿಗೆ ಬಂದಿದೆ. ಹಣಕ್ಕಾಗಿ ಮಾನಸಿಕವಾಗಿ ಒತ್ತಡ ತಂದು ದೌರ್ಜನ್ಯವೆಸಗಿದ್ದಾರೆ. ಅಧಿಕಾರಶಾಹಿ ಸರ್ಕಾರಕ್ಕೆ ಸರ್ಕಾರಿ ನೌಕರ ಬಲಿಪಶುವಾಗಿದ್ದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದು ಆರೋಪಿಸಿದರು.

ತಹಸೀಲ್ದಾರ್ ಮತ್ತು ಹೆಬ್ಬಾಳ್ಕರ್ ಆಪ್ತ ಸಹಾಯಕ ಸೋಮು ತಪ್ಪು ಮಾಡಿಲ್ಲವೆಂದರೇ ಪರಾರಿಯಾಗಿದ್ದು ಏಕೆ? ಸಚಿವೆ ಹೆಬ್ಬಾಳ್ಕರ್ ಪ್ರಭಾವದಿಂದಲೇ ಸೋಮು ಒತ್ತಡ ತಂದಿದ್ದಾನೆ. ಪ್ರಕರಣದಿಂದ ಅವರನ್ನು ದೂರವಿಡಲೂ ಸಾಧ್ಯವಿಲ್ಲ. ಪ್ರಭಾವಿಗಳ ಒತ್ತಡದಿಂದ ನಿಷ್ಪಕ್ಷಪಾತ ತನಿಖೆಯಾಗುತ್ತಿಲ್ಲ. ಆರೋಪಿಗಳನ್ನು ಮೊದಲು ಬಂಧಿಸಬೇಕು. ಅರೋಪಿಗಳ ರಕ್ಷಣೆಗಾಗಿಯೇ, ಬಂಧಿಸುವುದಕ್ಕೆ ವಿಳಂಬವಾಗುತ್ತಿದೆ. ತಕ್ಷಣ ಆರೋಪಿಗಳನ್ನು ಬಂಧಿಸದಿದ್ದರೆ, ಬಿಜೆಪಿಯಿಂದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದರು.

ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮುರುಘಂದ್ರಗೌಡ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net