

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹಳ್ಳಿಯಲ್ಲಿ ಹೊಲಗದ್ದೆ ಕೆಲಸ ಮಾಡಿಕೊಂಡು ಸಿಕ್ಕ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಇಬ್ಬರಿಗೆ ಬೆಟ್ಟಿಂಗ್ ಅದೇಗೋ ಗೀಳು ಅಂಟಿಕೊಂಡಿತ್ತು. ಬೆಟ್ಟಿಂಗ್‌ಗೆ ಹಣ ಹೊಂದಿಸಲು ಕೂಲಿ ಕಾಸು ಸಾಲದಾಯಿತು. ಕಡೆಗೆ ಇಬ್ಬರೂ ಸೇರಿ ಮಹಿಳೆಯರ ಸರಗಳವು ಮಾಡುವ ಕೃತ್ಯಕ್ಕೆ ಕೈಹಾಕತೊಡಗಿದರು. ಬೆಟ್ಟಿಂಗ್ ಗೀಳಿಗಾಗಿ ಸರಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡ ಖದೀಮರು ಕಡೆಗೆ ಪರಪ್ಪನ ಅಗ್ರಹಾರ ಪಾಲಾದರು.
ಇದು ಇತ್ತೀಚಿಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಬೇಧಿಸಿದ ಸರಗಳವು ಪ್ರಕರಣದಲ್ಲಿ ಹೊರಬಿದ್ದ ಕಳ್ಳರಿಬ್ಬರ ಮೂಲಕಥೆ. ಗೀಳಿಗೆ ಸಿಲುಕಿದ ದೊಡ್ಡಬಳ್ಳಾಪುರ ತಾಲೂಕು ಮಧುರೆ ಮೂಲದ ಶ್ರೀನಿವಾಸ್ ಹಾಗೂ ವೆಂಕಟೇಶ್ ಸರಗಳವು ಪ್ರಕರಣದಲ್ಲಿ ಜೈಲು ಪಾಲಾಗಿರುವವರು.
6 ತಿಂಗಳ ಹಿಂದೆ ಸರ ಕದ್ದಿದ್ದರು: ಸುಮಾರು 6 ತಿಂಗಳ ಹಿಂದೆ ನಡೆದಿದ್ದ ಸರಗಳವು ಪ್ರಕರಣ ಬೇಧಿಸಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಶ್ರೀನಿವಾಸ್ ಹಾಗೂ ವೆಂಕಟೇಶ್ ಎಂಬುವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದಾಗ ದೊಡ್ಡಬಳ್ಳಾಪುರ ತಾಲೂಕಿನ ನರಸಿಂಹನಹಳ್ಳಿ ಗ್ರಾಮದ ವೆಂಕಟಲಕ್ಷ್ಮಮ್ಮ ಎಂಬ ವೃದ್ಧೆಯ ಕೊರಳಲಿದ್ದ ಸುಮಾರು 10 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಿದ್ದ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದರು. ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಬಂದು ವೃದ್ಧೆಯ ಗಮನ ಬೇರೆಡೆ ಸೆಳೆದು ಸರ ಕಿತ್ತುಕೊಂಡು ಪರಾರಿಯಾಗಿದ್ದರು.
ಸಿಸಿ ಕ್ಯಾಮರಾಗಳ ತಲಾಶ್: ಕಳೆದ ಕೆಲವು ತಿಂಗಳಿಂದ ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಸರಗಳವು ಪ್ರಕರಣಗಳು ಹೆಚ್ಚಿನ ಹಿನ್ನೆಲೆಯಲ್ಲಿ ಅಲರ್ಟ್ ಆದ ಪೊಲೀಸರು ಸರಗಳ್ಳರಿಗೆ ತೀವ್ರ ಹುಡುಕಾಟ ಶುರುಮಾಡಿದ್ದರು. ಎಲ್ಲೆಲ್ಲಿ ಸರಗಳವು ಪ್ರಕರಣ ನಡೆದಿವೆ ಆಯಾ ವ್ಯಾಪ್ತಿಯಲ್ಲಿನ ಸಿಸಿ ಕ್ಯಾಮರಾಗಳ ಪರಿಶೀಲನೆ ಚುಕುರುಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ನರಸಿಂಹನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಸರಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಚಹರೆ ಗುರುತಿಸಿಲಾಗಿತ್ತು ಇದರ ಆಧಾರದ ಮೇಲೆ ಬೆನ್ನುಬಿದ್ದ ಪೊಲೀಸರ ಬಲೆಗೆ ಇಬ್ಬರು ಸರಗಳ್ಳರು ತಗಲಾಕಿಕೊಂಡಿದ್ದರು.
ಸ್ಥಳೀಯ ಗಿರವಿ ಅಂಗಡಿಯಲ್ಲಿ ಮಾರಾಟ: ಆರೋಪಿಗಳು ಕದ್ದ ಸರಗಳನ್ನು ಸ್ಥಳೀಯ ಗಿರವಿ ಅಂಗಡಿಗಳಲ್ಲಿ ಅಡಮಾನ ಇಡುವುದು ಇಲ್ಲವೇ ಮಾರುವುದು ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಪರಿಚಯಸ್ಥರ ಮೂಲಕ ಗಿರವಿ ಅಂಗಡಿಯೊಂದರಲ್ಲಿ ಕಷ್ಟ ಇದೆ ಹಣ ಬೇಕು ಎಂದು ವೃದ್ಧೆಯ ಸರ ಗಿರವಿ ಇಟ್ಟು ಹಣ ಪಡೆದಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು.
ಮಾಲೀಕನಿಗೆ ನೋಟಿಸ್: ಕಳವು ಮಾಲುಗಳನ್ನು ಅಡಮಾನ ಇಟ್ಟುಕೊಳ್ಳುವುದು ಅಥವಾ ಖರೀದಿಸುವುದು ಕಾನೂನುಬಾಹಿರವಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಗಿರವಿ ಅಂಗಡಿ ಮಾಲೀಕನಿಗೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೃದ್ಧೆಗೆ ಸರ ವಾಪಸ್: ನ್ಯಾಯಾಲಯದ ಅನುಮತಿ ಮೇರೆಗೆ ಗಿರವಿ ಅಂಗಡಿ ಮಾಲೀಕನಿಂದ ಸರವನ್ನು ವಶಕ್ಕೆ ಪಡೆದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಇನ್‌ಸ್ೆಕ್ಟರ್ ಸಾಧಿಕ್‌ಪಾಷಾ ಹಾಗೂ ಸಿಬ್ಬಂದಿ ನರಸಿಂಹನಹಳ್ಳಿ ಗ್ರಾಮದ ವೃದ್ಧೆ ವೆಂಕಟಲಕ್ಷ್ಮ ಅವರನ್ನು ಠಾಣೆಗೆ ಕರೆಸಿ ಅವರಿಗೆ ಸರ ಹಸ್ತಾಂತರಿಸಿದ್ದಾರೆ. ಸರ ಕಳೆದುಕೊಂಡು ಕಂಗಾಲಾಗಿದ್ದ ವೃದ್ಧೆ ಮರಳಿ ದೊರೆತ ಸರ ಕಂಡು ಭಾವುಕರಾದರಲ್ಲದೆ ಪೊಲೀಸರಿಗೆ ಹರಸಿದ್ದಾರೆ.
ತನಿಖೆ ವೇಳೆ ಆರೋಪಿಗಳು ಬೆಟ್ಟಿಂಗ್ ಗೀಳಿಗೆ ಬಿದ್ದಿದ್ದರು ಎಂಬುದು ತಿಳಿದು ಬಂದಿದೆ, ಬೆಟ್ಟಿಂಗ್‌ಗೆ ಹಣ ಹೊಂದಿಸಲು ಸರಗಳವು ಮಾಡುವ ಅಡ್ಡದಾರಿಗೆ ಇಳಿದಿದ್ದರು. ಈ ಕೃತ್ಯದಿಂದ ಸುಲಭವಾಗಿ ಹಣ ಸಂಪಾದನೆ ಮಾಡಬಹುದೆಂದು ಭಾವಿಸಿ ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಸಿಸಿ ಟಿವಿ ಕ್ಯಾಮರಾ ದೃಶ್ಯಾವಳಿಗಳ ಸಹಾಯದಿಂದ ಆರೋಪಿಗಳನ್ನು ಬಂಧಿಸಿದ್ದು, ಚಿನ್ನದ ಸರ ವಶಕ್ಕೆ ಪಡೆದು ಅದರ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.
ಸಾಧಿಕ್‌ಪಾಷಾ, ಇನ್‌ಸ್ೆಕ್ಟರ್ ಗ್ರಾಮಾಂತರ ಠಾಣೆ ದೊಡ್ಡಬಳ್ಳಾಪುರ
ದ್ವಿಚಕ್ರ ವಾಹನದಲ್ಲಿ ಹಿಂಬದಿಯಿಂದ ಬಂದ ಅಪರಿಚಿತರು ವಿಳಾಸ ಕೇಳುವ ನೆಪದಲ್ಲಿ ನನ್ನನ್ನು ತಡೆದು ಮಾತನಾಡಿಸಿದ್ದರು. ಅವರು ಏನು ಹೇಳುತ್ತಿದ್ದಾರೆ ಎಂಬುದು ತಿಳಿದುಕೊಳ್ಳುವಷ್ಟರಲ್ಲೇ ಕೊರಳಲ್ಲಿದ್ದ ಸರ ಕಿತ್ತುಕೊಂಡು ಪರಾರಿಯಾದರು. ಜೀವವೇ ಬಾಯಿಗೆ ಬಂದಾಗಿತ್ತು. 6 ತಿಂಗಳಾದರೂ ಕಳ್ಳರು ಪತ್ತೆಯಾಗದ ಹಿನ್ನೆಲೆಯಲ್ಲಿ ಇನ್ನು ಸರ ಸಿಗುವುದಿಲ್ಲ ಎಂದೇ ಭಾವಿಸಿದ್ದೆ ಆದರೆ ಪೊಲೀಸರು ಕಳ್ಳರನ್ನು ಹಿಡಿದಿದ್ದಲ್ಲದೇ ನನ್ನ ಸರ ವಾಪಸ್ ಕೊಡಿಸಿದ್ದಾರೆ ಅವರ ಕರ್ತವ್ಯ ನಿಷ್ಟೇಯನ್ನು ಅಭಿನಂದಿಸುತ್ತೇನೆ.
ವೆಂಕಟಲಕ್ಷ್ಮಮ್ಮ, ಸರ ಕಳೆದುಕೊಂಡಿದ್ದ ವೃದ್ಧೆ