

ತಿಪಟೂರು: ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದೆ ಬೈಪಾಸ್ ರಸ್ತೆ ಕಾಮಗಾರಿಗೆ ಮುಂದಾದ ಗುತ್ತಿಗೆದಾರರನ್ನು ಪ್ರಶ್ನಿಸಿದ ರೈತರನ್ನು ವಶಕ್ಕೆ ಪಡೆದು ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ವಿವಿಧ ರೈತ ಸಂಘಟನೆಗಳಿಂದ ಹುಚ್ಚಗೊಂಡನಹಳ್ಳಿಯಿಂದ ಎಸಿ ಕಚೇರಿವರೆಗೂ ಪಾದಯಾತ್ರೆ ಮಾಡಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜೂ.11ರಂದು ನಗರ ಸಮೀಪದ ಹುಚ್ಚಗೊಂಡನಹಳ್ಳಿ ಬೈಪಾಸ್ ರಸ್ತೆ ಕಾಮಗಾರಿಗೆ ಜಮೀನು ಬಿಟ್ಟುಕೊಟ್ಟ ರೈತನಿಗೆ ಸೂಕ್ತ ಪರಿಹಾರ ವಿತರಿಸದೆ, ಪೊಲೀಸರ ಬಲದೊಂದಿಗೆ ಕಾಮಗಾರಿಗೆ ಮುಂದಾದ ಗುತ್ತಿಗೆದಾರನ ಕ್ರಮ ಪ್ರಶ್ನಿಸಿದ ರೈತರ ಪೈಕಿ ಮೂವರ ವಿರುದ್ಧ ವಿವಿಧ ಪ್ರಕರಣ ದಾಖಲಿಸಿ, ರೈತ ಮುಖಂಡರ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸುವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಪೊಲೀಸರ ಕ್ರಮ ಖಂಡಿಸಿ ಎತ್ತಿನಹೊಳೆ ಮತ್ತು ಬೈ ಪಾಸ್ ರಸ್ತೆ ಹೋರಾಟ ಸಮಿತಿ, ಹಾಗೂ ರೈತ ಸಂಘಟನೆಗಳು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, 2013ರ ಭೂ ಕಾಯ್ದೆ ಸರಿಯಾಗಿ ತಿಳಿದುಕೊಳ್ಳದ ಪೊಲೀಸರು, ರಸ್ತೆಗಾಗಿ ಭೂಮಿ ಬಿಟ್ಟುಕೊಟ್ಟ ರೈತನಿಗೆ ಸೂಕ್ತ ಪರಿಹಾರ ವಿತರಿಸಲಾಗಿದೆಯೇ, ಇಲ್ಲವೇ, ಅಥವಾ ಭೂ ಸ್ವಾಧೀನಾಧಿಕಾರಿಗಳಿಂದ ವಶಪಡಿಸಿಕೊಂಡ ಜಮೀನಿನಲ್ಲಿ ಕಾಮಗಾರಿ ಮಾಡಲು ಅನುಮತಿ ಪತ್ರ ಇದೆಯೆ ಎಂಬುದನ್ನೂ ಪರಿಶೀಲಿಸದೆ, ರೈತನ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಇದನ್ನು ವಿರೋಧಿಸಿದ್ದಕ್ಕೆ ಗುತ್ತಿಗೆದಾರ ನೀಡಿದ ದೂರಿನ ಆಧಾರದಲ್ಲಿ ರೈತ ಮುಖಂಡರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ, ವಿವಿಧ ಪ್ರಕರಣ ದಾಖಲಿಸುವ ಮೂಲಕ ಕಾನೂನು ರಕ್ಷಕರೇ ಭಕ್ಷಕರಾಗಿದ್ದಾರೆ ಎಂದು ಆರೋಪಿಸಿದರು.
ನಿಯಮಾನುಸಾರ ನಿಗದಿತ ಪರಿಹಾರ ಪಾವತಿಸಿ ಕಾಮಗಾರಿ ಮುಂದುವರಿಸಿ ಎಂದು ಕೇಳುವುದು ತಪ್ಪೇ? ಯೋಜನೆಗಾಗಿ ಭೂಮಿ ಕೊಡುವ ಸಣ್ಣ ಹಿಡುವಳಿದಾರನಿಗೆ ಪರಿಹಾರ ನೀಡದೆ, ಪೊಲೀಸ್ ಬಲದೊಂದಿಗೆ ಆತನನ್ನು ಹೆದರಿಸಿ ಕಾಮಗಾರಿ ನಡೆಸಿದರೆ ಇದ್ದ ಸ್ವಲ್ಪ ಜಮೀನು ಕಳೆದುಕೊಂಡ ರೈತನ ಪಾಡು ಏನಾಗಲಿದೆ ಎಂದು ಸರ್ಕಾರ ಯೋಚಿಸಿದೆಯೇ? ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೂ ಮುಂಚೆ ಗುತ್ತಿಗೆದಾರರಿಗೆ ಎನ್‌ಒಸಿ ಸಿಗುವುದಾದರೂ ಹೇಗೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಪ್ರಶ್ನಿಸಿದರು. ಮುಖಂಡ ಆರ್.ಕೆ.ಎಸ್.ಸ್ವಾಮಿ ಇತರರಿದ್ದರು.
ಜಿಲ್ಲಾಧಿಕಾರಿ ಭೂ ಸ್ವಾಧೀನ ವಿಚಾರವಾಗಿ ಸ್ಪಷ್ಟ ಆದೇಶ ನೀಡಿದ್ದು, ವಿನಾಕಾರಣ ರೈತರ ಮೇಲೆ ಪ್ರಕರಣ ದಾಖಲಾಗಿದ್ದರೆ ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಕೆ.ಆರ್.ನಂದಿನಿ ಉಪವಿಭಾಗಾಧಿಕಾರಿ ಗುತ್ತಿಗೆದಾರನ ದೂರು ಸ್ವೀಕರಿಸಿ ರೈತರ ವಿರುದ್ಧ ಪ್ರಕರಣ ದಾಖಲಿಸುವುದಾದರೆ, ನಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ ಆತನ ವಿರುದ್ಧ ನಾವೂ ದೂರು ಕೊಡುತ್ತೇವೆ, ನಮ್ಮ ದೂರನ್ನೂ ಸ್ವೀಕರಿಸಿ ಕ್ರಮ ಕೈಗೊಳ್ಳಿ. ದೇವರಾಜು, ತಾಲೂಕು ರೈತ ಸಂಘದ ಅಧ್ಯಕ್ಷ, ತಿಮ್ಲಾಪುರ ಸಮಾಜದಲ್ಲಿ ಕಾನೂನು ಮತ್ತು ಮಾನವೀಯತೆ ಎರಡೂ ಅತ್ಯವಶ್ಯ. ಯಾವುದೇ ದುರುದ್ದೇಶವಿಲ್ಲದೆ ನ್ಯಾಯ ಕೇಳುವ ರೈತರ ಮೇಲೆ ಹಿಟ್ಲರ್ ಕಾನೂನು ಪ್ರಯೊಗಿಸುವುದು ಸಭ್ಯ ಸಮಾಜದ ಲಕ್ಷಣವಲ್ಲ. ಸಿ.ಬಿ.ಶಶಿಧರ್ ತಾಲೂಕು ಜನಸ್ಪಂದನ ಟ್ರಸ್ಟ್ ಅಧ್ಯಕ್ಷ