

ಶಿವಮೊಗ್ಗ: ಬಿಜೆಪಿಯಲ್ಲಿ ಎಲ್ಲವನ್ನೂ ಅನುಭವಿಸಿ ಈಗ ಕಾಂಗ್ರೆಸ್ ನೀಡಿರುವ ಹುದ್ದೆಯನ್ನು ಉಳಿಸಿಕೊಳ್ಳಲು ನಮ್ಮ ಪಕ್ಷ ಹಾಗೂ ನಾಯಕರ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಅಭಿವೃದ್ಧಿ ವಿಷಯವನ್ನು ಯಾವುದೇ ವೇದಿಕೆಯಲ್ಲಿ ಚರ್ಚೆ ಮಾಡಲು ನಾನು ಸಿದ್ಧ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ಗೆ ಸವಾಲು ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬಗ್ಗೆ, ನಮ್ಮ ನಾಯಕರಾದ ಕೆ.ಎಸ್.ಈಶ್ವರಪ್ಪ ಬಗ್ಗೆ ನೀವು ಟೀಕೆ ಮಾಡಿದ್ದೀರಿ. ನಿಮ್ಮ ಪಕ್ಷದ ವಿಚಾರ ನೋಡಿಕೊಳ್ಳಿ. ನಮ್ಮ ಕಡೆ ಬೆರಳು ತೋರಿಸುವ ಅವಶ್ಯಕತೆ ಇಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡರು.
ನೀವು ಹಿಂದೆ ಬಿಜೆಪಿಯಲ್ಲಿದ್ದಾಗ ಏನು ಮಾತನಾಡಿದ್ದೀರಿ ಎಂಬುದರ ದಾಖಲೆ ಇದೆ. ರಾಜ್ಯಕ್ಕೆ ನೀಡಿದ ಅನುದಾನದ ಬಗ್ಗೆ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಿದ್ದರೂ ಭಂಡತನದಿಂದ ನಿಮ್ಮ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ. ಜನರ ಗಮನ ಬೇರೆಡೆ ಸೆಳೆಯಲು ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ ಎಂದು ಹರಿಹಾಯ್ದರು.
ಶರಾವತಿ ಸಂತ್ರಸ್ತರಿಗೆ ಭೂಮಿ ಹಕ್ಕು ಕೊಡಲಾಗಲಿಲ್ಲ ಎಂಬ ನೋವು ನನಗಿದೆ. ನನ್ನ ಕೆಲಸವನ್ನು ಪ್ರಮಾಣಿಕವಾಗಿ ಮಾಡುತ್ತೇನೆ. ನಿಮ್ಮ ಸರ್ಕಾರದಿಂದ ಏನು ಮಾಡಬೇಕೋ ಅದನ್ನು ಮಾಡಿ. ಸುಮ್ಮನೆ ಕೆಸರೆರಚಾಟ ಬೇಡ. ಅಡಕೆ ಸಂಶೋಧನಾ ಕೇಂದ್ರ, ವಿಐಎಸ್‌ಎಲ್, ರೈಲ್ವೆ ಮೇಲ್ಸೇತುವೆ, ಹೈವೆ ಬಗ್ಗೆ ಯಾವ ನೈತಿಕತೆಯಿಂದ ಮಾತನಾಡಿದ್ದೀರಿ? ಎಂದು ಖಾರವಾಗಿ ಪ್ರಶ್ನಿಸಿದರು.
ಬಿಜೆಪಿ ನಾಯಕರು ಇರುವ ಕಡೆಗಳಲ್ಲಿ ರೈಲ್ವೆ ಮೇಲ್ಸೇತುವೆ ಆಗಿದೆ ಎಂದು ಆಯನೂರು ಹೇಳಿದ್ದಾರೆ. ಸವಳಂಗ ರಸ್ತೆಯಲ್ಲಿ ನಮ್ಮಪ್ಪನ ಆಸ್ತಿ ಇಲ್ಲ. ಅಲ್ಲಿಯೂ ಸೇತುವೆ ಆಗಿಲ್ಲವೇ? ಎರಡು ವರ್ಷದಲ್ಲಿ ಮೂರು ಸೇತುವೆ ನಿರ್ಮಾಣವಾಗಿದೆ. ಒಬ್ಬನೇ ಗುತ್ತಿಗೆದಾರ ಕಾಮಗಾರಿ ನಡೆಸುತ್ತಿರುವುದರಿಂದ ಭದ್ರಾವತಿ ರೈಲ್ವೆ ಮೇಲ್ಸೇತುವೆ ವಿಳಂಬವಾಗುತ್ತಿದೆಯಷ್ಟೇ ಎಂದರು.
ವಿಐಎಸ್‌ಎಲ್ ಉಳಿಸಲು ನಾನು ಎಲ್ಲ ಪ್ರಯತ್ನ ಮಾಡುತ್ತಿದ್ದೇನೆ. ಈಗ ಕೇಂದ್ರ ಗೃಹ ಸಚಿವ ಅಮಿತ್ ಷಾ ಉಕ್ಕು ಸಚಿವರಿಗೆ ಪತ್ರ ಬರೆದಿದ್ದು ವಿಐಎಸ್‌ಎಲ್ ಮುಚ್ಚದಂತೆ ಸೂಚಿಸಿದ್ದಾರೆ ಎಂದ ಬಿ.ವೈ.ರಾಘವೇಂದ್ರ ಇದಕ್ಕೆ ಸಂಬಂಧಿಸಿದ ಪತ್ರವನ್ನು ಬಿಡುಗಡೆ ಮಾಡಿದರು. ಎಂಪಿಎಂಗೆ ಕೊನೇ ಮೊಳೆ ಹೊಡೆದಿದ್ದು 2015ರಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರ್ಕಾರವಲ್ಲವೇ ಎಂದು ಆಯನೂರು ಅವರನ್ನು ಪ್ರಶ್ನಿಸಿದರು.
ತುಮಕೂರು-ಶಿವಮೊಗ್ಗ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ಕನೇ ಹಂತದಲ್ಲಿ ನಡೆಯಲಿದೆ. ಮಲವಗೊಪ್ಪದಲ್ಲಿ ಭೂಸ್ವಾಧೀನಕ್ಕೆ ಕಾನೂನು ತೊಡಕು ಎದುರಾಗಿದೆ. ಆ ಭೂಮಿ ಸಕ್ಕರೆ ಕಾರ್ಖಾನೆಗೆ ಸೇರಿದ್ದು ಎಂದು ಆರ್‌ಟಿಸಿಯಲ್ಲಿ ನಮೂದಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಭೂಸ್ವಾಧೀನ ಪ್ರಕ್ರಿಯೆಗೆ ಸಹಕರಿಸಬೇಕೆಂದು ಒತ್ತಾಯಿಸಿದರು.
ಶರಾವತಿ ಸಂತ್ರಸ್ತರಿಗೆ ನ್ಯಾಯ:ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ ಶರಾವತಿ ಸಂತ್ರಸ್ತರಿಗೆ ಭೂಮಿ ಒದಗಿಸುವಂತೆ ಒತ್ತಾಯಿಸಿದ್ದೆವು. ಆದರೆ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇರುವುದರಿಂದ ರಾಜ್ಯ ಸರ್ಕಾರವೇ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಬೇಕಿದೆ. ಈ ವಿಷಯದಲ್ಲಿ ಉದಾಸೀನ ಮಾಡುತ್ತಿರುವುದು ರಾಜ್ಯದ ಕಾಂಗ್ರೆಸ್ ಸರ್ಕಾರ. ನಮ್ಮ ಮೇಲೆ ಗೂಬೆ ಕೂರಿಸುತ್ತಿರುವುದು ಎಂದು ರಾಘವೇಂದ್ರ ಕಿಡಿಕಾರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್, ಎಂ.ಬಿ.ಹರಿಕೃಷ್ಣ, ಕಾರ್ಯದರ್ಶಿ ರಮೇಶ್, ಪ್ರಮುಖರಾದ ಜ್ಯೋತಿ ಪ್ರಕಾಶ್, ಅಣ್ಣಪ್ಪ ಇದ್ದರು.