ರಾಜಕೀಯವಾಗಿ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ

DVG_vachanananda swamiji
Published on

ಹರಿಹರ: ರಾಜಕೀಯವಾಗಿ ಪಂಚಮಸಾಲಿ ಸಮುದಾಯದ ಮುಖಂಡರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಆರೋಪಿಸಿದ್ದಾರೆ.

ಗುರುವಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳರು ಮಾಜಿ ಕೇಂದ್ರ ಸಚಿವ ದಿ.ಅನಂತಕುಮಾರ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಜತೆ ಸೈಕಲ್ ತುಳಿದು ರಾಜ್ಯದಲ್ಲಿ ಪಕ್ಷ ಕಟ್ಟಿದ್ದಾರೆ. ಆದರೂ ಅವರನ್ನು ಪಂಚಮಸಾಲಿ ಸಮುದಾಯದವರು ಎಂಬ ಕಾರಣದಿಂದ ಮೂಲೆಗುಂಪು ಮಾಡಲಾಗಿದೆ ಎಂದಿದ್ದಾರೆ.

ಸೈಕಲ್ ಮೇಲೆ ರಾಜ್ಯ ಸುತ್ತಿ ಪಕ್ಷ ಕಟ್ಟಿದ ಯತ್ನಾಳರನ್ನು ಗುರುತಿಸಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸ್ಥಾನ ನೀಡಿದ್ದರು. 20 ವರ್ಷಗಳ ಹಿಂದೆಯೇ ಅವರು ಕೇಂದ್ರ ನಾಯಕರಾಗಿದ್ದರು. ಈಗಲೂ ಅವರು ಕೇಂದ್ರದಲ್ಲಿ ಪ್ರಭಾವಿ ನಾಯಕರಾಗಿರಬೇಕಿತ್ತು. ಆದರೆ, ಅಂತಹ ಯತ್ನಾಳರನ್ನು ಒಂದು ತಾಲೂಕು ಮಟ್ಟಕ್ಕೆ ಸೀಮಿತವಾಗಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಅರ್ಹತೆ ಇದ್ದರೂ ಯಡಿಯೂರಪ್ಪ ಅವರ ನಂತರದ ಅವಧಿಯಲ್ಲಿ ಮುಖ್ಯಮಂತ್ರಿಯಾಗುವುದು, ಇತ್ತೀಚೆಗೆ ವಿರೋಧ ಪಕ್ಷದ ನಾಯಕನಾಗುವ, ಪಕ್ಷದ ರಾಜ್ಯಾಧ್ಯಕ್ಷನಾಗುವ ಅವಕಾಶ ತಪ್ಪಿಸಲಾಯಿತು. ಅವರು ಪಂಚಮಸಾಲಿ ಸಮುದಾಯದವರೆಂದು ತಾರತಮ್ಯ ಧೋರಣೆ ತೋರಲಾಗುತ್ತಿದೆ ಎಂದು ಶ್ರೀಗಳು ಪ್ರಕಟಣೆಯಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net