

ಬ್ಯಾಟರಾಯನಪುರ: ಯಲಹಂಕ ವಲಯದ ಹುಣಸಮಾರನಹಳ್ಳಿ ಗ್ರಾಮದಲ್ಲಿ ಸ್ಥಳೀಯರಿಂದ ಒತ್ತುವರಿಯಾಗಿದ್ದ 8 ಎಕರೆ 16 ಗುಂಟೆ ಸರ್ಕಾರಿ ಭೂಮಿಯನ್ನು ಯಲಹಂಕ ತಹಸೀಲ್ದಾರ್ ಸೋಮವಾರ ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಹುಣಸಮಾರನಹಳ್ಳಿಯ ಗ್ರಾಮದ ಸರ್ವೆ ಸಂಖ್ಯೆ 158ರಲ್ಲಿ 46 ಕೋಟಿ ರೂ. ಬೆಲೆಬಾಳುವ 8 ಎಕರೆ 16 ಗುಂಟೆ ಸರ್ಕಾರಿ ಭೂಮಿಯನ್ನು ಜನರು ಅತಿಕ್ರಮಿಸಿಕೊಂಡು ಹಾಲೋಬ್ರಿಕ್ಸ್ ಫ್ಯಾಕ್ಟರಿ, ಮನೆ, ಕಾಂಪೌಂಡ್ ನಿರ್ವಿುಸಿ ಕೊಂಡಿದ್ದರು. ಇನ್ನು ಕೆಲವರು ಕೃಷಿಗಾಗಿ ಭೂಮಿ ಒತ್ತುವರಿ ಮಾಡಿ ಕೊಂಡಿದ್ದರು. ಅಕ್ರಮವಾಗಿ ಮನೆ ನಿರ್ವಿುಸಿಕೊಂಡು ಮದ್ಯಪಾನ ಸೇರಿ
ವಿವಿಧ ಅಕ್ರಮ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿದ್ದರು. ಇದೀಗ ಒತ್ತುವರಿ ತೆರವುಗೊಳಿಸಲಾಗಿದ್ದು, ನಾಳೆ ಬೇಲಿ ಹಾಕಲಾಗುವುದು ಎಂದು ತಹಸೀಲ್ದಾರ್ ರಘುಮೂರ್ತಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ತೆರವಿಗೆ ಮುಂಚೆ ನೋಟಿಸ್: ಒತ್ತುವರಿ ತೆರವಿಗೆ ಸರ್ಕಾರದ ಆದೇಶವಿದ್ದು, ಭೂಮಾಪನ ಇಲಾಖೆಯಿಂದ ಒತ್ತುವರಿ ಜಾಗ ಗುರುತಿಸಿ ತೆರವು ಮಾಡಲಾಗಿದೆ. ಒತ್ತುವರಿದಾರರಿಗೆ ತೆರವು ಮಾಡಲು ನೋಟಿಸ್ ನೀಡಿ ಅದಕ್ಕೆ ಸಂಬಂಧಿಸಿದ ಯಾವುದಾದರೂ ದಾಖಲೆಗಳಿದ್ದರೆ ನೀಡುವಂತೆ ಕೇಳಲಾಗಿತ್ತು. ಒತ್ತುವರಿದಾರರಿಂದ ಯಾವುದೇ ದಾಖಲೆಗಳಿಲ್ಲದಿರುವುದು ಖಚಿತವಾದ ನಂತರ ಸರ್ಕಾರಿ ಸಿಬ್ಬಂದಿ ಜತೆ ಹೋಗಿ ತೆರವು ಮಾಡಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು.
ಬೆದರಿಕೆಯಿಂದ ಉಪಯೋಗವಿಲ್ಲ
ಸರ್ಕಾರಿ ಭೂ ಒತ್ತುವರಿ ತೆರವುಗೊಳಿಸಿ, ಸರ್ಕಾರದ ವಶಕ್ಕೆ ಪಡೆಯುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿ ಮೇಲೂ ಹೆಚ್ಚು ಜವಾಬ್ದಾರಿಯಿದೆ. ಹಾಗಾಗಿ ನಿರ್ದಾಕ್ಷಿಣ್ಯವಾಗಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಭೂ ಒತ್ತುವರಿ ತೆರವು ಕುರಿತು ಮಾಹಿತಿ ಸಂಗ್ರಹಿಸಿಲು ಸದನ ಸಮಿತಿ ರಚಿಸಲಾಗಿದೆ. ಈ ಸಮಿತಿ ಪ್ರತಿ ಹದಿನೈದು ದಿನಗಳಿಗೊಮ್ಮೆ ತಹಸೀಲ್ದಾರರು, ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಸಭೆ ಕರೆದು ತೆರವು ಕಾರ್ಯಾಚರಣೆ ಬಗ್ಗೆ ಮಾಹಿತಿ ಕೇಳುತ್ತಾರೆ. ತೀವ್ರ ಒತ್ತಡವಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ತೆರವು ಕಾರ್ಯದಿಂದ ಹಿಂದೆ ಸರಿಯುವುದಿಲ್ಲ ಎಂದು ರಘುಮೂರ್ತಿ ಹೇಳಿದ್ದಾರೆ.
ಪೊಲೀಸ್ ರಕ್ಷಣೆ ಅಗತ್ಯ
ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಒತ್ತವರಿ ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳಿಗೆ ರಕ್ಷಣೆ ಅಗತ್ಯವಾಗಿದೆ. ಅಧಿಕಾರಿ ಹಾಗೂ ಸಿಬ್ಬಂದಿಗೆ ಒತ್ತುವರಿದಾರರು ಬೆದರಿಕೆ ಒಡ್ಡಿ, ಅಡ್ಡಿಪಡಿಸುತ್ತಾರೆ. ಹಲ್ಲೆ ನಡೆಸುವುದಾಗಿ ಫೋನ್ ಕರೆಗಳನ್ನು ಮಾಡುತ್ತಾರೆ. ಹಾಗಾಗಿ ಒತ್ತುವರಿ ಸಮಯಕ್ಕೆ ಪೊಲೀಸರು ನಮಗೆ ಭದ್ರತೆಯನ್ನು ಒದಗಿಸಿ ಕಾರ್ಯಾಚರಣೆ ಸುಗಮವಾಗಿ ನಡೆಸಲು ನೆರವಾಗಬೇಕು ಎಂದು ತಹಸೀಲ್ದಾರ್ ಮನವಿ ಮಾಡಿದ್ದಾರೆ.