

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಆತನ ಪ್ರತಿಷ್ಟಿತ ಕುಟುಂಬದಿಂದ ಬಂದವನು, ಯಾವುದೇ ಅಪರಾಧ ಪ್ರಕರಣಗಳ ಹಿನ್ನೆಲೆಯಿಲ್ಲದಿದ್ದರೂ ಕಲಿತ ಚಟಕ್ಕೆ ದರೋಡೆಗಿಳಿದವನು. ಚಟಕ್ಕೆ ದಾಸನಾಗಿ ಕಾನೂನು ಬಾಹಿರ ಚಟುವಟಿಕೆಗಿಳಿದ ಆತ ಈಗ ಪೊಲೀಸರ ಅತಿಥಿ.
ಇದು.ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಇತ್ತೀಚಿಗೆ ನಡೆದ ಕ್ಯಾಬ್ ದರೋಡೆ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಆರೋಪಿಯ ಕಥೆ. ಮಾದಕ ವಸ್ತುಗಳ ದಾಸನಾಗಿ ಹಣಕ್ಕಾಗಿ ಕ್ಯಾಬ್ ಚಾಲಕನಿಂದ ಹಣ ಸುಲಿಗೆ ಮಾಡಿ ಕಡೆಗೆ ಅದೇ ಕ್ಯಾಬ್ ದರೋಡೆ ಮಾಡಿ ಪರಾರಿಯಾಗಿದ್ದ ಆರೋಪಿ ಖಾನ್ ಎಂಬುವನನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಕ್ಯಾಬ್ ಸಹಿತ ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ ಸುಲಿಗೆಗೊಳಗಾಗಿ ಕ್ಯಾಬ್ ಕಳೆದುಕೊಂಡಿದ್ದ ಚಾಲಕ ರವಿಗೆ ಕ್ಯಾಬ್ ಮರಳಿಕೊಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಟೆಕ್ಕಿ ಹೆಸರಲ್ಲಿ ಕ್ಯಾಬ್ ಬುಕ್:
ಆ.16ರಂದು ಆರೋಪಿ ಖಾನ್ ಟೆಕ್ಕಿ ಹೆಸರಿನಲ್ಲಿ ಬೆಂಗಳೂರಿನ ವಿಲ್ಸನ್‌ಗಾರ್ಡನ್‌ನಿಂದ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನಂದಿಬೆಟ್ಟ ಸುತ್ತಾಡಿ ಸಂಜೆ ಡಾಬಾವೊಂದಕ್ಕೆ ಹೋಗಿದ್ದ ಈ ವೇಳೆ ಚಾಲಕನನ್ನು ಊಟಕ್ಕೆ ಆಹ್ವಾನಿಸಿದ್ದ. ಇದ್ದಕ್ಕಿದ್ದಂತೆ ಡಾಬಾದಲ್ಲಿ ಚಾಕು ತೋರಿಸಿ ಜೀವ ಬೆದರಿಕೆ ಹಾಕಿದ ಆರೋಪಿ ಚಾಲಕನ ಯುಪಿಎಯಿಂದ 10 ಸಾವಿರ ರೂಪಾಯಿಯನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ, ಜತೆಗೆ ಚಾಲಕನ ಮೊಬೈಲ್ ಕಸಿದು ಕಾರಿನ ಕೀ ಕೊಡುವಂತೆ ಬೆದರಿಸಿ ಕ್ಯಾಬ್ ಸಮೇತ ಪರಾರಿಯಾಗಿದ್ದ.
ಪಾರ್ಲರ್‌ನಲ್ಲಿ ಆರೋಪಿ:
ಚಾಲಕ ರವಿ ಈ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಆರೋಪಿಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಆರೋಪಿ ಲೊಕೇಷನ್ ವಿಶ್ವನಾಥಪುರ ಠಾಣೆ ವ್ಯಾಪ್ತಿಯ ಸ್ಪಾವೊಂದರಲ್ಲಿ ಇರುವುದು ಪತ್ತೆಯಾಗಿತ್ತು. ಆರೋಪಿಯನ್ನು ಬಂಧಿಸಿದ ಪೊಲೀಸರು ಸ್ಪಾನಲ್ಲೇ ನಿಲುಗಡೆ ಮಾಡಿದ್ದ ಕ್ಯಾಬ್‌ನ್ನು ವಶಕ್ಕೆ ಪಡೆದಿದ್ದರು. ತನಿಖೆ ನಡೆಸಿ ಕ್ಯಾಬ್‌ನನ್ನು ಚಾಲಕನಿಗೆ ಹಸ್ತಾಂತರಿಸಿದ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗೆ ಯಾವುದೇ ಅಪರಾಧದ ಹಿನ್ನೆಲೆ ಇಲ್ಲ ಎಂಬುದು ತಿಳಿದುಬಂದಿದೆ. ಮೋಜು ಮಸ್ತಿಗಾಗಿ ಹಣ ಹೊಂದಿಸಲು ದರೋಡೆಗೆ ಸಂಚು ರೂಪಿಸಿದ್ದ. ಪ್ರಕರಣ ಸಂಬಂಧ ತನಿಖೆ ಆರಂಭಿಸಿದ ವೇಳೆ ಆರೋಪಿ ಸ್ಪಾವೊಂದರಲ್ಲಿ ಇರುವುದು ಗೊತ್ತಾಗಿ ಆತನನ್ನು ಬಂಧಿಸಿ ಕ್ಯಾಬ್ ವಶಕ್ಕೆ ಪಡೆಯಲಾಗಿತ್ತು. ಚಾಲಕನಿಗೆ ಕ್ಯಾಬ್ ಹಸ್ತಾಂತರಿಸಲಾಗಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಾಧಿಕ್ ಪಾಷಾ, ಇನ್ಸ್‌ಪೆಕ್ಟರ್ ದೊಡ್ಡಬಳ್ಳಾಪುರ ಗ್ರಾಮಾಂತರ