

ಬಾದಾಮಿ: ಪಟ್ಟಣದ ಬಿಇಒ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ ಶಿಕ್ಷಕರ ಹೆಚ್ಚುವರಿ ವೇತನ ಪಾವತಿಗೆ ಲಂಚ ಪಡೆಯುತ್ತಿದ್ದ ವೇಳೆ ಕಚೇರಿ ಲೆಕ್ಕ ಅಧೀಕ್ಷಕ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ವೆಂಕಟೇಶ ಇನಾಮದಾರ ಲೋಕಾಯುಕ್ತರ ಬಲೆಗೆ ಬಿದ್ದ ಲೆಕ್ಕ ಅಧೀಕ್ಷಕ. ಗುಳೇದಗುಡ್ಡದ ವೆಂಕಟೇಶ್ವರ ಪ್ರೌಢಶಾಲೆ ಶಿಕ್ಷಕರ ವೇತನ ಶೀಘ್ರ ಬಿಡುಗಡೆಗಾಗಿ ವೆಂಕಟೇಶ 18 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದ. ಅದರಂತೆ 10ಸಾವಿರ ರೂ. ಮೊದಲು ಪಡೆದುಕೊಂಡಿದ್ದು, ಉಳಿದ 8 ಸಾವಿರ ರೂ. ದೂರುದಾರ ಹುನಗುಂದ ತಾಲೂಕಿನ ಚಿತ್ತರಗಿಯ ಸತ್ಯಪ್ಪ ಸಂಗಪ್ಪ ಕಾಮ ಅವರಿಂದ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರು ದಾಳಿ ನಡೆಸಿ ಲೆಕ್ಕ ಅಧೀಕ್ಷಕನನ್ನು ಬಂಧಿಸಿದ್ದಾರೆ. ದಾಳಿ ವೇಳೆ ಲೋಕಾಯುಕ್ತ ಸಿಪಿಐ ಎಚ್.ಎನ್. ಬಿದರಿ ಹಾಗೂ ಸಿಬ್ಬಂದಿ ಇದ್ದರು.