

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಉದ್ಯಮಿ, ಅಕ್ಕಿಕಾಳಿನಲ್ಲಿ ಬರೆಯುವ ಸೂಕ್ಷ್ಮ ಕಲೆಯನ್ನು ಕರಗತ ಮಾಡಿಕೊಂಡಿರುವ ಮೈಕ್ರೋ ಪರಮೇಶ್(ಪರಮೇಶ ಸಂಕ್ರಪ್ಪ ಬಂಡಿ) ಏಕಕಾಲದಲ್ಲಿ ತ್ರಿಭಾಷೆಯಲ್ಲಿ ಅಕ್ಕಿಕಾಳಿನಲ್ಲಿ ರಾಷ್ಟ್ರಗೀತೆ ಬರೆದು ಕೈಚಳಕ ಪ್ರದರ್ಶಿಸಿದ್ದಾರೆ. ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ 1ಗಂಟೆ 45 ನಿಮಿಷದಲ್ಲಿ 141 ಅಕ್ಕಿಕಾಳನ್ನು ಬಳಸಿಕೊಂಡು ಅತಿ ಕಡಿಮೆ ಅವಧಿಯಲ್ಲಿ ಕನಿಷ್ಠ ಅಕ್ಕಿ ಕಾಳಿನಲ್ಲಿ ಬರೆದಿರುವುದು ಇವರ ವಿಶೇಷತೆಯಾಗಿದೆ.
ರಾಷ್ಟ್ರಗೀತೆ ಬರೆಯಲು ಕನ್ನಡ ಭಾಷೆಗೆ 42, ಹಿಂದಿಗೆ 48 ಹಾಗೂ ಇಂಗ್ಲೀಷ್ಗೆ 47ಅಕ್ಕಿಕಾಳುಗಳನ್ನು ಬಳಸಿದ್ದಾರೆ. ಒಟ್ಟು 141 ಅಕ್ಕಿಕಾಳನ್ನು ಬಳಸಿಕೊಂಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿರುವ ಪರಮೇಶ್ ಮೂಲತಃ ಹಾವೇರಿಯವರು. ಅಕ್ಕಿಕಾಳಿನಲ್ಲಿ ಬರೆಯುವ ಸೂಕ್ಷ್ಮ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅಕ್ಕಿಕಾಳಿನಲ್ಲಿ ಸಂಪೂರ್ಣ ರಾಷ್ಟ್ರಗೀತೆ ಬರೆದು ಅದಕ್ಕೆ ಪ್ರೇಮ್ ಅಳವಡಿಸಿದ್ದಾರೆ. ಈಗಾಗಲೇ ಇವರು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್, ವಂಡರ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ರೆಕಾರ್ಡ್ ಆಫ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಹಾವೇರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಇದೇ ಕಲೆಯಲ್ಲಿ ಲಿಮ್ಕಾ ಮತ್ತು ಗಿನ್ನೆಸ್ ವಿಶ್ವ ದಾಖಲೆ ಮಾಡುವ ಆಕಾಂಕ್ಷೆಯನ್ನು ಪರಮೇಶ್ ಹೊಂದಿದ್ದಾರೆ.